ಮಡಿಕೇರಿ, ಡಿ. 9 : ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ರೂಪಿಸಿದ ಯೋಜನೆಗಳ ಸೌಲಭ್ಯ ಪೌರಕಾರ್ಮಿಕರು ಪಡೆಯುವಲ್ಲಿ ಮುಂದಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ.ನಗರದ ಬಾಲಭವನದಲ್ಲಿ ನಗರಸಭೆ ಹಾಗೂ ಪ್ರಜಾಸತ್ಯ ಕನ್ನಡ ದಿನಪತ್ರಿಕೆ ಇವರ ಆಶ್ರಯದಲ್ಲಿ ಪೌರ ಕಾರ್ಮಿಕರಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರ ಸುಂದರವಾಗಿ ಕಾಣಲು ಪೌರ ಕಾರ್ಮಿಕರ ಸೇವೆ ಮಹತ್ತರವಾಗಿದೆ. ಪೌರ ಕಾರ್ಮಿಕರು ದಿನನಿತ್ಯ ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ನಗರದ ಸ್ವಚ್ಛತೆ ಕಡೆ ಗಮನ ಹರಿಸುತ್ತಾರೆ. ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ವಸತಿ ಸೌಲಭ್ಯ, ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುವದು ಹಾಗೂ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಳ್ಳುವಂತಾಗಿ ಆರೋಗ್ಯಯುತ ಬದುಕನ್ನು ನಡೆಸುವಂತೆ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಸಲಹೆ ಮಾಡಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ ನಗರ ಮತ್ತು ಪಟ್ಟಣವನ್ನು ಸ್ವಚ್ಛಗೊಳಿಸುವಲ್ಲಿ ಪೌರ ಕಾರ್ಮಿಕರ ಸೇವೆ ಬಹು ದೊಡ್ಡದು. ಪ್ರತಿ ದಿನದ ಕೆಲಸ ಕಾರ್ಯಗಳಲ್ಲಿ ಪೌರ ಕಾರ್ಮಿಕರು ನಗರ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮುಖ್ಯವಾಗಿ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಇದರಿಂದ ನಗರದ ಜನತೆಯ ಆರೋಗ್ಯವು ಉತ್ತಮ ವಾಗಿರುತ್ತದೆ ಎಂದು ತಿಳಿಸಿದರು.

ನಗರ ಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ ನಗರದ ಶುಚಿತ್ವವನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಅಗತ್ಯತೆ ಸಾಕಷ್ಟಿದೆ. ನಗರವು ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದರಿಂದ ನಗರ ಸ್ವಚ್ಚತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಸ್ವಚ್ಚತೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ನಗರಸಭೆ ಪೌರಾಯುಕ್ತೆ ಶುಭ ಅವರು ಮಾತನಾಡಿ ಪೌರ ಕಾರ್ಮಿಕರಿಗೆ 2016-17ನೇ ಸಾಲಿನಲ್ಲಿ ಯೋಜನೆಯಡಿಯಲ್ಲಿ ಆರೋಗ್ಯ ಉಚಿತ ಶಿಬಿರ, ರಕ್ಷಣಾ ಸಾಮಗ್ರಿಗಳ ವಿತರಣೆ, ಪೌರ ಕಾರ್ಮಿಕ ಮಕ್ಕಳಿಗೆ ವಿಮಾ ಸೌಲಭ್ಯ ಕೊಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯರುಗಳಾದ ಗಣೇಶ್, ಚುಮ್ಮಿ ದೇವಯ್ಯ, ಪೌರಕಾರ್ಮಿಕರ ನೌಕರರ ಸಂಘದ ಕಾರ್ಯದರ್ಶಿ ಓಬ್ಳಿ, ನಗರಸಭೆಯ ತಾಹಿರ್ ಇತರರು ಇದ್ದರು.