ಕುಶಾಲನಗರ, ಅ.23 : ಪೊಲೀಸ್ ಇಲಾಖೆ ಮತ್ತು ಜನಸಮುದಾಯದ ನಡುವೆ ಉತ್ತಮ ಬಾಂಧವ್ಯ ಹೊಂದಿದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಂಪತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ - ನಾಗರಿಕ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ ಜನರ ಸಹಕಾರದೊಂದಿಗೆ ಸೋಮವಾರಪೇಟೆ ತಾಲೂಕನ್ನು ಅಪರಾಧ ಮುಕ್ತವಾಗಿ ಪರಿವರ್ತಿಸಲು ಸಾಧ್ಯ ಎಂದಿದ್ದಾರೆ. ಎಲ್ಲರ ಸಲಹೆ ಸೂಚನೆ ಪಡೆಯುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ನೂತನ ಡಿವೈಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಸಂಪತ್ ಕುಮಾರ್ ತಮ್ಮ ಅಧೀನದಲ್ಲಿ ಬರುವ ಠಾಣೆಗಳಲ್ಲಿ ನಾಗರಿಕ ಸಂಪರ್ಕ ಸಭೆ ನಡೆಸಿ ಜನರ ಅಹವಾಲನ್ನು ಸ್ವೀಕರಿಸಿದರು. ಕುಶಾಲನಗರ ಗ್ರಾಮಾಂತರ ಮತ್ತು ನಗರ ಠಾಣೆಗಳಲ್ಲಿ ಪ್ರತ್ಯೇಕ ಸಭೆಯಲ್ಲಿ ಪಾಲ್ಗೊಂಡ ಅವರು ದಿನದ 24 ಗಂಟೆ ಕಾಲ ಪೊಲೀಸರು ನಿರಂತರ ಸೇವೆ ನೀಡಲು ಬದ್ಧರಾಗಿದ್ದಾರೆ ಎಂದು ತಿಳಿಸಿದರು. ಠಾಣಾ ವ್ಯಾಪ್ತಿಯ ನಾಗರಿಕರಿಂದ ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ, ಠಾಣಾಧಿಕಾರಿಗಳಾದ ಜೆ.ಈ ಮಹೇಶ್, ಜಗದೀಶ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಜನಪ್ರತಿನಿಧಿಗಳು, ಸಂಘ - ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.