ಶ್ರೀಮಂಗಲ, ಡಿ. 21: ಪೊರಾಡ್ ಗ್ರಾಮದ ಕಕ್ಕಟ್ಟ್ ಪೊಳೆ ನದಿಯಲ್ಲಿ ವಿವಾದಾತ್ಮಕ ಸ್ಥಳದಲ್ಲಿ ಮರಳು ಗಣಿಗಾರಿಕೆಯನ್ನು ಗ್ರಾಮದಲ್ಲಿ ಶಾಂತಿ ಸ್ಥುವ್ಯವಸ್ಥೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ 2 ವರ್ಷದ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಅಲ್ಲಿ ಮತ್ತೆ ಮರಳು ತೆಗೆಯಲು ಅನುಮತಿ ನೀಡುವ ಅಧಿಕಾರ ಊರು ಪಂಚಾಯಿತಿಗೆ ಇಲ್ಲ. ಈ ವಿಚಾರವನ್ನು ಮತ್ತೆ ಸಭೆಯಲ್ಲಿ ತಂದು ಗೊಂದಲ ಸೃಷ್ಟಿಸದಂತೆ ಕಟ್ಟುನಿಟ್ಟಿನ ನಿರ್ಣಯ ಕೈಗೊಳ್ಳಲಾಯಿತು.

ಊರಿನ ಅಧ್ಯಕ್ಷ ಮೀದೇರಿರ ಕೇಶು ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮದಲ್ಲಿ ನಡೆದ 60ನೇ ವರ್ಷದ ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ನದಿಯಲ್ಲಿ ಮರಳು ತೆಗೆಯಲು ತಡೆ ಮಾಡುತ್ತಿದ್ದಾರೆ. ಈ ನದಿ ಇವರ ಸ್ವಂತದ್ದೇ ಎಂದು ಪ್ರಶ್ನಿಸಿ, ಮರಳು ಗಣಿಗಾರಿಕೆಗೆ ಅವಕಾಶ ನೀಡುವಂತೆ ಮೀದೇರಿರ ರಾಜಾ ತಿಮ್ಮಯ್ಯ ಹಾಗೂ ಮೀದೇರಿರ ಸಂತೋಷ್ ವಿಚಾರ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಗ್ರಾ.ಪಂ. ಮಾಜಿ ಸದಸ್ಯೆ ಮೀದೇರಿರ ಕವಿತಾ ರಾಮು ಅವರು, ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಹಲವಾರು ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿತ್ತು. ಇದು ಗ್ರಾಮದ ಹಿತಾಸಕ್ತಿಗೆ ಮಾರಕವಾಗಿತ್ತು. ಅಲ್ಲದೆ ಇದಕ್ಕೆ ತಡೆಮಾಡಿದ ಸಂದರ್ಭ ತನ್ನ ಮೇಲೆ ಹಾಗೂ ಸ್ಥಳೀಯ ಪತ್ರಕರ್ತರ ಮೇಲೂ ಮರಳು ಮಾಫಿಯದವರು ಕೊಲೆ ಬೆದರಿಕೆ ಒಡ್ಡಿದರು. ಮುಂದೆ ಈ ದಂಧೆ ಮತ್ತಷ್ಟು ಬೃಹದಾಕಾರವಾಗಿ ಬೆಳೆದು ಗ್ರಾಮದ ಶಾಂತಿ ಕದಡುವದನ್ನು ತಪ್ಪಿಸಲು ಈ ಅಕ್ರಮ ದಂಧೆÉಯನ್ನು ತಡೆಯಲು ನಿರ್ಧರಿಸಲಾಯಿತು.

ತನ್ನ ಗ್ರಾ.ಪಂ. ಅವಧಿಯ ಗ್ರಾಮ ಸಭೆಯಲ್ಲಿ ಇಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯದ ಪ್ರತಿಯೊಂದಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಸ್ಥಳೀಯರು ಮರಳು ತೆಗೆಯಲು ಕೆಲವರು ಮುಂದಾಗಿದ್ದು, ಸ್ಥಳೀಯರ ಹೆಸರಿನಲ್ಲಿ ಹೊರಭಾಗಕ್ಕೆ ಮರಳು ಸಾಗಿಸಿರುವ ನಿದರ್ಶನವಿದೆ. ಆದ್ದರಿಂದ ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

ಅಣ್ಣೀರ ಸದಾ ಮುತ್ತಪ್ಪ ಇದಕ್ಕೆ ಧ್ವನಿಗೂಡಿಸಿ, ಅಕ್ರಮ ಮರಳು ಗಣಿಗಾರಿಕೆಯಿಂದ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಶಾಲಾ ವಾಹನದವರು ಈ ಮಾರ್ಗದಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಈ ದಂಧೆಯನ್ನು ಶಾಶ್ವತವಾಗಿ ನಿಲ್ಲಿಸುವಂತೆ ಒತ್ತಾಯಿಸಿದರು.

ಊರೋರ್ಮೆ ನಡೆಯುವ ಜಾಗದಲ್ಲಿ ನೀರಿನ ಸೌಲಭ್ಯಕ್ಕಾಗಿ ತೆರೆದ ಬಾವಿಯನ್ನು ನಿರ್ಮಿಸಲು ಊರಿನ ಪರವಾಗಿ ಗ್ರಾ.ಪಂ.ಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಬಿರುನಾಣಿಯಲ್ಲಿ ನಡೆಯುವ ನಾಡ್ ಮಂದ್‍ಗೆ ಪೋರಾಡ್ ಊರಿನಿಂದ ಊರು ತಕ್ಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಈ ಮೂಲಕ ಪದ್ಧತಿ, ಪರಂಪರೆ, ಆಚರಣೆಗೆ ಮಾನ್ಯತೆ ನೀಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಪುತ್ತರಿ ಊರೋರ್ಮೆ ಸಂದರ್ಭ ಊರ್ ಮಂದ್‍ನಲ್ಲಿ ಭಾಗವಹಿಸುವ ಪೋರಾಡ್ ಊರ್ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಪಿನಿಂದ ಪಾಲ್ಗೊಳ್ಳಬೇಕು. ಗ್ರಾಮದ ಯುವಕರು ಸಾಂಸ್ಕøತಿಕ ಕಲೆಯ ಕೋಲಾಟ್ ಇತ್ಯಾದಿಗಳನ್ನು ಕಲಿಯಲು ಗ್ರಾಮದಲ್ಲಿ ತರಬೇತಿ ಪಡೆಯಬೇಕು. ಗ್ರಾಮದಲ್ಲಿ ಕೆಲವು ಹಿರಿಯರ ನಂತರ ಈ ಪದ್ಧತಿ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋಗಲು ಆಸಕ್ತಿ ವಹಿಸಬೇಕೆಂದು ಹಿರಿಯರು ಸಲಹೆ ನೀಡಿದರು.

ಈ ಸಂದರ್ಭ ಊರು ಪಂಚಾಯಿತಿಯ ಉಪಾಧ್ಯಕ್ಷ ಅಣ್ಣೀರ ಜಿ.ಪೂಣಚ್ಚ, ಕಾರ್ಯದರ್ಶಿ ಬಲ್ಯಮೀದೇರಿರ ಶಿವಕುಮಾರ್ ಮಾಜಿ ಕಾರ್ಯದರ್ಶಿ ಬಲ್ಯಮೀದೇರಿರ ಚಂಗಪ್ಪ, ನಾಡ್ ತಕ್ಕ ಕಾಯಪಂಡ ಅಯ್ಯಪ್ಪ, ಊರುತಕ್ಕ ಅಣ್ಣೀರ ಕಾಶಿ, ಮಾಜಿ ಅಧ್ಯಕ್ಷರುಗಳಾದ ಬಲ್ಯಮೀದೇರಿರ ಪೊನ್ನಪ್ಪ, ಮಲ್ಲೇಂಗಡ ಧನಂಜಯ, ಹಿರಿಯರಾದ ಜುಬಾ ಸುಬ್ಬಯ್ಯ, ಮುತ್ತಣ್ಣ, ವಿಜಯ ಪ್ರಸಾದ್, ಮೀದೇರಿರ ವಿಜಯ, ಬಲ್ಯಮೀದೇರಿರ ಚೋಂದಮ್ಮ ಮತ್ತಿತರರು ಸಭೆಯಲ್ಲಿ ವಿವಿಧ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.