ವೀರಾಜಪೇಟೆ, ಅ. 20: ಹಾಕಿ ಕೊಡಗು ಸಂಸ್ಥೆಯಿಂದ ಪೊನ್ನಂಪೇಟೆಯ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಜಿಲ್ಲಾ ಮಟ್ಟದ ನಾಕೌಟ್ ಹಾಕಿ ಪಂದ್ಯಾಟವು ಅಕ್ಟೋಬರ್ 22 ರಿಂದ 24ರವರೆಗೆ ನಡೆಯಲಿದೆ ಎಂದು ಹಾಕಿ ಕೊಡಗು ಸಂಸ್ಥೆಯ ಕಾರ್ಯದರ್ಶಿ ಪಳಂಗಂಡ ಲವ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 1ರಿಂದ23 ರವರೆಗೆ ಪಂದ್ಯಾಟವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಪ್ರತಿಷ್ಠಿತ 30 ತಂಡಗಳು ಲೀಗ್ ಪಂದ್ಯಾಟದಲ್ಲಿ ಭಾಗವಹಿಸಿ ದ್ದವು. ಅಂತಿಮ ಘಟ್ಟಕ್ಕೆ 8 ತಂಡಗಳು ಪ್ರವೇಶಿಸಿವೆ. ಅಕ್ಟೋಬರ್ 21ರಿಂದ ಅಂತಿಮ ಘಟ್ಟದ ಪಂದ್ಯಾಟ ಪ್ರಾರಂಭಗೊಳ್ಳ ಬೇಕಿತ್ತು. ಆದರೆ 21 ರಂದು ಜಿಲ್ಲೆಯಾದ್ಯಂತ ವಿದ್ಯುತ್ ಆಡಚಣೆ ಇರುವದರಿಂದ ನೀರಿನ ಸರಬರಾಜು ಸ್ಥಗಿತಗೊಳ್ಳುವ ಕಾರಣ 22ರಿಂದ 24ರವರೆಗೆ ನಡೆಯಲಿದೆ. ಅಂತಿಮ ಘಟ್ಟದಲ್ಲಿ ಎಸ್.ಆರ್.ಸಿ ಕಾಕೋಟುಪರಂಬು, ಬಿ.ಬಿ.ಸಿ ಗೋಣಿಕೊಪ್ಪ, ಯುನೈಟೆಡ್ ಸ್ಪೋಟ್ರ್ಸ್ಕ್ಲಬ್ ರೆಡ್, ಡಾಲ್ಫಿನ್ಸ್ ಸೋಮವಾರಪೇಟೆ, ಹಾತೂರು ಸ್ಪೋಟ್ರ್ಸ್ ಕ್ಲಬ್, ಇವೈಸಿ ಬೇಗೂರ್, ಕೋಣನಕಟ್ಟೆ, ಈಗಲ್ಸ್ ಅಮ್ಮತ್ತಿ ತಂಡಗಳು ಸೆಣಸಲಿದೆ.
ಮುಂದಿನ ತಿಂಗಳು ನವೆಂಬರ್ 7ರಿಂದ 17 ರವರೆಗೆ ಪೊನ್ನಂಪೇಟೆಯ ಆಸ್ಟ್ರೋಟರ್ಫ್ ಮೈದಾನದಲ್ಲಿ ಪ್ರಾಥಮಿಕ, ಫ್ರೌಡ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ತಂಡದ ನೋಂದಣಿಗಾಗಿ ಬುಟ್ಟಿಯಂಡ ಚಂಗಪ್ಪ 9481833162. ಕೊಕ್ಕಂಡ ರೋಷನ್ 9483394515 ಇವರುಗಳನ್ನು ಸಂಪರ್ಕಿಸಬಹುದೆಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಖಜಾಂಚಿ ಐನಂಡ ಲಾಲ ಅಯ್ಯಣ್ಣ, ಸಮಿತಿಯ ತಾಂತ್ರಿಕ ನಿರ್ದೇಶಕ ತೀತಿರ ಸೋಮಣ್ಣ, ಜಂಟಿ ಕಾರ್ಯದರ್ಶಿ ಕೊಕ್ಕಂಡ ರೋಷನ್, ಪಂದ್ಯಾಟದ ತಾಂತ್ರಿಕ ನಿದೇರ್ಶಕ ಟೀಸಾ ಬೋಪಯ್ಯ, ನಿರ್ದೇಶಕ ಸಂಕಿ ಪೂವಣ್ಣ, ಹೆಚ್.ಎನ್ ಅರುಣ್ ಉಪಸ್ಥಿತರಿದ್ದರು.