*ಗೋಣಿಕೊಪ್ಪಲು, ಆ. 9: ಐದು ಎಕರೆ ಒಳಗಿರುವ ಪೈಸಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಲು ಕಂದಾಯ ಇಲಾಖೆ ಮುಂದಾಗ ಬಾರದೆಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ಮಾತನಾಡಿ ನಿರ್ಣಯ ಕೈಗೊಳ್ಳಲಾಯಿತು. ತಾಲೂಕಿನಲ್ಲಿ ಕೆಲವು ಖಾಸಗಿ ಕಂಪನಿಗಳು ಮತ್ತು ಪ್ರಭಾವಿಗಳು 30 ಏಕ್ರೆಗೂ ಅಧಿಕ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೆ 5 ಏಕ್ರೆ ಜಾಗ ಒತ್ತುವರಿ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿರುವದು ಖಂಡನೀಯ ಎಂದರು.

ಯಾವದೇ ಕಾರಣಕ್ಕೂ 5 ಏಕ್ರೆ ಪೈಸಾರಿ ಜಾಗವನ್ನು ತೆರವುಗೊಳಿಸದೆ ಹೆಚ್ಚು ಒತ್ತುವರಿ ಮಾಡಿಕೊಂಡ ಪ್ರಭಾವಿ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿ ಎಂದು ತಹಶೀಲ್ದಾರ್ ಮಹದೇವಸ್ವಾಮಿ ಅವರಿಗೆ ಸೂಚಿಸಿದರು.

ತಿತಿಮತಿ ಗೌರಿ ಕೆರೆ ಒತ್ತುವರಿ ತೆರÀವುಗೊಳಿಸಲು ಸರ್ವೆ ಕಾರ್ಯ ನಡೆದರೂ ಸರಕಾರಕ್ಕೆ ವರದಿ ನೀಡದೆ ಯಾವದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸರ್ವೆ ದಾಖಲಾತಿಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಭದ್ರವಾಗಿ ಇಟ್ಟಿದ್ದಾರೆ ಎಂದು ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಸಭೆಯಲ್ಲಿ ಲೇವಡಿ ಮಾಡಿದರು. ಸರ್ವೆ ಅಧಿಕಾರಿ ಲೊಕೇಶ್ ಅವರನ್ನು ಉತ್ತರ ನೀಡುವಂತೆ ತಹಶೀಲ್ದಾರ್ ಆದೇಶಿಸಿದರು.

ಅಸ್ಸಾಂ ರಾಜ್ಯದವರೆಂದು ಬಾಂಗ್ಲಾದೇಶದ ನುಸುಳುಕೋರರು ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಇವರಿಂದ ಯಾವದೇ ಅನಾಹುತಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಪೊಲೀಸ್ ಇಲಾಖೆ ಇವರ ಬಗ್ಗೆ ಮಾಹಿತಿ ಸಂಗ್ರಹಿಸಿ ಆಗುವ ಅನಾಹುತಗಳನ್ನು ತಪ್ಪಿಸಲು ಮುಂದಾಗಬೇಕು ಎಂದು ಸಿ.ಕೆ. ಬೋಪಣ್ಣ ಸಭೆಯಲ್ಲಿ ತಿಳಿಸಿದರು. ಕೆಲವು ಬಾಂಗ್ಲಾ ನಿವಾಸಿಗಳು ಜಿಲ್ಲೆಯಲ್ಲಿ ಗುರುತಿನ ಚೀಟಿ ಮತ್ತು ಪಡಿತರ ಚೀಟಿ ಪಡೆದುಕೊಂಡ ಉದಾಹರಣೆಗಳಿವೆ. ಇನ್ನು ಕೆಲವರ ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆಗಳ ಹೆಸರು ಮತ್ತು ವಿಳಾಸ ಬದಲಾಗಿರುವದು ಕಾಣಬಹುದಾಗಿದೆ. ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ.ಸದಸ್ಯ ಶಶಿ ಸುಬ್ರಮಣಿ ಒತ್ತಾಯಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕ ಬೋಪಯ್ಯ ಕಾರ್ಮಿಕರಾಗಿ ಕರೆಸಿಕೊಳ್ಳುತ್ತಿರುವ ತೋಟದ ಮಾಲೀಕರು ಇವರ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು. ಆಯಾಯ ಪಟ್ಟಣದ ಸಂತೆ ದಿನ ಬಾಂಗ್ಲಾ ದೇಶಿಗರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭ ಪೊಲೀಸರು ಇವರ ವಿಳಾಸ ಹೆಸರು ಮತ್ತು ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಹಾಗೂ ಮಾಲೀಕರು ಬರುವವರೆಗೆ ಇವರನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಮಾಲೀಕರಿಂದ ಪೂರ್ಣ ಮಾಹಿತಿ ಪಡೆದ ನಂತರ ಬಿಡುವಂತೆ ಸಲಹೆ ನೀಡಿದರು. ಆದರೆ ಬಾಂಗ್ಲಾ ದೇಶದ ನುಸುಳುಕೋರರ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವದೇ ಸಮಸ್ಯೆ ನೀಡಬಾರದು ಎಂದು ತಿಳಿಸಿದರು.

ಚೆನ್ನಂಗೊಲ್ಲಿ ಗ್ರಾಮದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿತ್ತು. ಈ ಬಗ್ಗೆ ಗೋಣಿಕೊಪ್ಪಲು ಠಾಣೆಯಲ್ಲಿ ದೂರು ನೀಡಿದರೆ ಜಿ.ಪಂ ಸದಸ್ಯರ ಮೇಲೆಯೇ ಉಪನಿರೀಕ್ಷಕರು ಹರಿಹಾಯ್ದು ಉಡಾಫೆಯ ಮಾತುಗಳನ್ನು ಆಡುತ್ತಾರೆ. ಉಪನಿರೀಕ್ಷಕರ ಮೇಲೆ ಕ್ರಮ ಕೈಗೊಳ್ಳಿ ಎಂದು ಪಂಕಜ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರ ನೀಡಿದ ಕೆ.ಜಿ. ಬೋಪಯ್ಯ ಡಿ.ವೈ.ಎಸ್.ಪಿ. ನಾಗಪ್ಪ ಅವರಲ್ಲಿ ಉಪನಿರೀಕ್ಷಕರಿಗೆ ಸೌಜನ್ಯದಿಂದ ವರ್ತಿಸಲು ತರಬೇತಿ ನೀಡಿ ಎಂದು ಹೇಳಿದರು. ಈ ಬಗ್ಗೆ ಕ್ರಮ ಕೈಗೊಳ್ಳುವದಾಗಿ ಡಿ.ವೈ.ಎಸ್.ಪಿ. ನಾಗಪ್ಪ ತಿಳಿಸಿದರು.

ಆನೆ ಹಾವಳಿ ತಡೆಗಟ್ಟಲು ಆನೆ ಓಡಿಸುವ ಕಾರ್ಯ ಕೈಗೊಳ್ಳದೆ ಆನೆಗಳನ್ನು ಶಾಶ್ವತವಾಗಿ ಗ್ರಾಮಗಳಗೆ ಮರಳಿಬಾರದಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಅಜ್ಜಮಾಡ ಶಂಕರು ನಾಚಪ್ಪ ಸಭೆಯ ಮುಂದಿಟ್ಟರು. ಇದಕ್ಕೆ ಉತ್ತರ ನೀಡಿದ ಅರಣ್ಯಾಧಿಕಾರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಆನೆ ಹಿಡಿಯುವ ಕಾರ್ಯಕ್ಕೆ ಮುಂದಾಗುವದಾಗಿ ತಿಳಿಸಿದರು.

ಭತ್ತಕ್ಕೆ ಬೆಂಬಲ ಬೆಲೆ ರೂ. 10 ಸಾವಿರನೀಡಬೇಕು. ಕೇರಳ ರಾಜ್ಯದಲ್ಲಿ ಏಕ್ರೆಗೆ 10 ಸಾವಿರ ರೂಪಾಯಿ ಬೆಂಬಲ ಬೆಲೆಯಾಗಿ ನೀಡುತ್ತಿದೆ. ಈ ಮಾದರಿಯನ್ನೇ ಸರಕಾರ ಅನುಸರಿಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದರು. ಇದಕ್ಕೆ ಉತ್ತರ ನೀಡಿದ ಕೆ.ಜಿ ಬೋಪಯ್ಯ ಭತ್ತಕ್ಕೆ ಬೆಂಬಲ ಬೆಲೆ ನೀಡಲು ವಿಧಾನ ಸಭೆಯಲ್ಲಿ ಪ್ರಸ್ತಾಪಿಸುವದಾಗಿ ತಿಳಿಸಿದರು. ಕುಟ್ಟಂದಿ, ಪರಗಟಗೇರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆದರೂ ಅಧಿಕ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಕೊರತೆ ಎದುರಿಸುತ್ತಿರುವ ಇಲಾಖೆ ಹೆಚ್ಚುವರಿಯಾಗಿ ಕೆಲವು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ನೇಮಿಸಿಕೊಳ್ಳುವಂತೆ ಅಪ್ಪಂಡೇರಂಡ ಭವ್ಯ ತಿಳಿಸಿದರು. ಸರಕಾರದಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ನೀಡಲಾಗಿದೆ. ಶೀಘ್ರದಲ್ಲೇ ಅತಿಥಿ ಶಿಕ್ಷಕರನ್ನು ನೇಮಿಸಲಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ತಿಳಿಸಿದರು. ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಹರೀಶ್, ಸದಸ್ಯರಾದ ಪಂಕಜ, ಲೀಲಾವತಿ, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ಚಲನ್, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕಿರಣ್ ¥ಡ್ನೇಕರ್, ತಹಶೀಲ್ದಾರ್ ಮಹದೇವಪ್ಪ, ಡಿ.ವೈ.ಎಸ್.ಪಿ. ನಾಗಪ್ಪ ಉಪಸ್ಥಿತರಿದ್ದರು.