ಸೋಮವಾರಪೇಟೆ,ಆ.4: ಸೋಮವಾರಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗ ಒತ್ತುವರಿ ತೆರವು ವಿಳಂಬವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಂದಾಯ ಇಲಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿಗಳು ಇಂದು ಸೋಮವಾರಪೇಟೆ ತಾಲೂಕು ಕಛೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿ ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಇಲ್ಲಿನ ಕಂದಾಯ ಇಲಾಖಾ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಯ ಬಗ್ಗೆ ಪ್ರಗತಿ ವಿವರ ಬಯಸಿದರು. ಈ ಸಂದರ್ಭ ಕಂದಾಯ ನಿರೀಕ್ಷಕ ಕೆ.ವಿ.ಮೋಹನ್ ಕುಮಾರ್ ಅವರು ಪೈಸಾರಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ 49 ಪ್ರಕರಣಗಳು ಬಾಕಿ ಇವೆ ಎಂದು ತಿಳಿಸಿದರು.
ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳದಿದ್ದರೆ ಅಮಾನತು ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿದರೆ ಆ ಜಾಗವನ್ನು ಬಡವರಿಗೆ ನಿವೇಶನ, ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಉಪಯೋಗಿಸಬಹುದು. ಮುಂದಿನ ಜನಸಂಪರ್ಕ ಸಭೆಯು ನಡೆಯುವದರÀ ಒಳಗಾಗಿ ಪ್ರಗತಿಯನ್ನು ತೋರಿಸಬೇಕು ಎಂದು ತಹಸೀಲ್ದಾರ್ ಶಿವಪ್ಪ ಅವರಿಗೆ ಸೂಚಿಸಿದರು.
ಕಳೆದ 8 ತಿಂಗಳಿನಿಂದ ಬಿಪಿಎಲ್ ಕಾರ್ಡ್‍ಗಾಗಿ ಪಟ್ಟಣದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅಲೆಯುತ್ತಿದ್ದೇನೆ. ಆಹಾರ ನಿರೀಕ್ಷರು ಕೆಲಸ ಮಾಡಿಕೊಡುತ್ತಿಲ್ಲ ಎಂದು ಕೊಡ್ಲಿಪೇಟೆಯ ಕೆ.ಡಿ.ರಾಜು ಆರೋಪಿಸಿದರು. ಮಡಿಕೇರಿಗೆ ತೆರಳಿದ್ದ ಆಹಾರ ನಿರೀಕ್ಷಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಆಹಾರ ನಿರೀಕ್ಷಕರೊಂದಿಗೆ ಚರ್ಚಿಸಿ ಸೂಕ್ತ ದಾಖಲಾತಿಗಳನ್ನು ಪಡೆದು ಬಿಪಿಎಲ್ ಕಾರ್ಡ್ ವಿತರಿಸುವಂತೆ ಸೂಚಿಸಿದರು.
ಪಟ್ಟಣದ ಕಸವಿಲೇವಾರಿ ಸಮಸ್ಯೆ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಕಂದಾಯ ಇಲಾಖೆಗೆ ಕರೆಸಿ ಮಾಹಿತಿ ಪಡೆದರು. ಸಂಗಯ್ಯನಪುರ ಗ್ರಾಮದಲ್ಲಿ ಕಂದಾಯ ಇಲಾಖೆ ಕಸವಿಲೇವಾರಿಗೆ ಒಂದೂವರೆ ಎಕರೆ ಜಾಗವನ್ನು ಮೀಸಲಿಟ್ಟಿದ್ದು, ಆ ಜಾಗದಲ್ಲೇ ಕಸವಿಲೇವಾರಿಗೆ ಸಿದ್ದತೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಮಾಹಿತಿ ನೀಡಿದರು.
ವೈಜ್ಞಾನಿಕ ಕಸವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಯಾವದನ್ನೂ ವಿಳಂಬ ಮಾಡಬಾರದು ಎಂದ ಜಿಲ್ಲಾಧಿಕಾರಿ, ಪಟ್ಟಣ ಪಂಚಾಯಿತಿ ಸಿದ್ದಲಿಂಗಪುರದಲ್ಲಿ ಕಸವಿಲೇವಾರಿಗೆ ಖರೀದಿಸಿರುವ ಜಾಗ ಹಾಗೂ ವಿಳಂಬಕ್ಕೆ ಕಾರಣಗಳ ಬಗ್ಗೆ ಮಾಹಿತಿ ಪಡೆದರು.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಜಂಕ್ಷನ್‍ನಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕೆಲ ಸಾರ್ವಜನಿಕರು ಆಗಾಗ್ಗೆ ಕಸವನ್ನು ಸುರಿಯುತ್ತಿರುವ ಬಗ್ಗೆ ದೂರುಗಳಿದ್ದು, ಬೇಳೂರು ಗ್ರಾಮ ಪಂಚಾಯಿತಿ ಯವರು ಕೂಡಲೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಈ ಸಂದರ್ಭ ಗ್ರೇಡ್ 2 ತಹಸೀಲ್ದಾರ್ ನರಗುಂದ್, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.