ಗೋಣಿಕೊಪ್ಪಲು, ಅ. 16: ಕಾನೂರು ಗ್ರಾಮದ ಕೋತೂರುವಿನ ಲಕ್ಕುಂದ ಕಾಲೋನಿ ವ್ಯಾಪ್ತಿಯಲ್ಲಿ ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಸುಮಾರು 30 ಎಕರೆ ಜಾಗವನ್ನು ಪ್ರಭಾವಿಗಳು ಭೂಕಬಳಿಕೆ ಮೂಲಕ ಸೆಂಟ್‍ಗೆ ರೂ.1.50 ಲಕ್ಷದವರೆಗೆ ಮಾರಾಟ ಮಾಡಿ ವಂಚಿಸುತ್ತಿದ್ದಾರೆ. ಈ ಹಿಂದೆ ಹಲವು ಪರಿಶಿಷ್ಟ ವರ್ಗದವರು ಸಮಾಜ ಕಲ್ಯಾಣ ಇಲಾಖೆ ನಿರ್ಮಿಸಿಕೊಟ್ಟಿದ್ದ ವಸತಿಯಲ್ಲಿ ವಾಸವಿದ್ದರು. ಇದೀಗ ಪ್ರಭಾವಿಗಳು ಇಲ್ಲಿನ ಕಾರ್ಮಿಕ ವರ್ಗವನ್ನು ಬೆದರಿಕೆ ಒಡ್ಡಿ, ಓಡಿಸಿ ಸದರಿ ಸ್ಥಳವನ್ನು ಅಕ್ರಮವಾಗಿ ಅನ್ಯರಿಗೆ ಮಾರಾಟ ಮಾಡುತ್ತಿರುವದಾಗಿ ಲಕ್ಕುಂದ ಗ್ರಾಮ ಪಂಚಾಯಿತಿ ಸದಸ್ಯ ಕಾಡ್ಯಮಾಡ ಬೋಪಣ್ಣ ಕಾನೂರು ಗ್ರಾಮ ಸಭೆಯಲ್ಲಿ ಆರೋಪಿಸಿದರು. ಹಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‍ಗೆ ದೂರು ನೀಡುವ ಮೂಲಕ ತೆರವುಗೊಳಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಇತ್ತೀಚೆಗೆ ಕಾನೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯು ಅಧ್ಯಕ್ಷೆ ಬಿ.ಸಿ.ಲತಾಕುಮಾರ್ ಅಧ್ಯಕ್ಷತೆ ಹಾಗೂ ಕಾನೂರು ವೈದ್ಯೆ ರಾಸ್ಯ ಅವರ ಸಮ್ಮುಖದಲ್ಲಿ ಕಾನೂರು-ಕೋತೂರು ಮಹಿಳಾ ಸಮಾಜದಲ್ಲಿ ನಡೆದು ಹಲವು ಸಮಸ್ಯೆಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು.

ಪೈಸಾರಿ ಕೆರೆ ತೆರವು, ದೇವಸ್ಥಾನಕ್ಕೆ ಸೇರಿದ ಜಾಗ ಒತ್ತುವರಿ ತೆರವು ಹಾಗೂ ಎಸ್‍ಸಿ-ಎಸ್‍ಟಿ ಜನಾಂಗ ವಾಸವಿದ್ದ ಜಾಗವನ್ನು ಪ್ರಭಾವಿಗಳು ಅಕ್ರಮವಾಗಿ ವಶಪಡಿಸಿಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಕಾನೂನು ಬಾಹಿರವಾಗಿ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡವರನ್ನು ತೆರವು ಗೊಳಿಸುವ ಮೂಲಕ ನ್ಯಾಯ ದೊರಕಿಸಿಕೊಡಲು ಗ್ರಾಮ ಸಭೆಯಲ್ಲಿ ಪ್ರಸ್ತಾಪವಾಯಿತು.

ಕಾನೂರುವಿನ ನಿಡುಗುಂಬ ಎಂಬಲ್ಲಿ ಸುಮಾರು 20 ಕುಟುಂಬಗಳು ವಾಸವಿದ್ದು, ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿಕೊಂಡಿದ್ದು, ಈ ಬಗ್ಗೆ ಕೂಡಲೇ ಬೇಲಿ ತೆರವುಗೊಳಿಸಿ ದಾರಿ ಸುಗಮಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಖಾಯಂ ವೈದ್ಯರ ನೇಮಕ ಅಗತ್ಯ- ಸುರೇಶ್

ಕಾನೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸರಹದ್ದಿನಲ್ಲಿ ಬರುತ್ತಿದ್ದು, ಸಾಕಷ್ಟು ಗಿರಿಜನ ಕುಟುಂಬ ವಾಸವಾಗಿದೆ. ಕಾರ್ಮಿಕ ಹಾಗೂ ದುರ್ಬಲ ವರ್ಗದ ಕುಟುಂಬ ಅಧಿಕವಿದ್ದು, ಕಾನೂರು ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕಾತಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ನೇಮಕಾತಿಗಾಗಿ ಮಡಿಕೇರಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವಂತಾಗಬೇಕು ಎಂದು ಗ್ರಾ.ಪಂ.ಸದಸ್ಯ ಕೆ.ಆರ್.ಸುರೇಶ್ ಅಭಿಪ್ರಾಯಪಟ್ಟರು.

ಇದೇ ಸಂದರ್ಭ ಮಾತನಾಡಿದ ವೈದ್ಯೆ ಡಾ. ರಾಸ್ಯ ಅವರು, ತನಗೆ ವಾರದ ರಜೆಯೂ ಇಲ್ಲ. ಬಾಳೆಲೆ ಹಾಗೂ ಕಣ್ಣಂಗಾಲ ಆಸ್ಪತ್ರೆಗೆ ಭೇಟಿ ನೀಡಬೇಕಾಗಿದೆ. ಆಶಾ ಕಾರ್ಯಕರ್ತೆಯರ ಹುದ್ದೆ, ಡಿ ಗ್ರೂಪ್ ಹುದ್ದೆಯೂ ಖಾಲಿ ಇದೆ. ಜಿಲ್ಲೆಯ ವಿವಿಧ ಆಸ್ಪತ್ರೆಗೆ ಆಯುಷ್ ವೈದ್ಯರ ನೇಮಕಾತಿಯಾದಲ್ಲಿ ಕಾನೂರಿ ನಲ್ಲಿಯೇ ರೋಗಿಗಳ ಸೇವೆ ಮಾಡಬಹುದಾಗಿದೆ ಎಂದರು.

ಶ್ರೀಮಂತರಿಗೂ ತಾಯಿ ಕಾರ್ಡ್ ಅನಿವಾರ್ಯ. ಮುಂದೆ ಜನನ ದೃಢೀಕರಣ, ಜಾತಿ ದೃಢೀಕರಣ ಇತ್ಯಾದಿಗಳಿಗೆ ತಾಯಿ ಕಾರ್ಡ್ ಅನಿವಾರ್ಯ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಹಲವು ಆರೋಗ್ಯವಿಮೆ, ಯೋಜನೆಗಳು ಲಭ್ಯವಿದ್ದು, ಫಲಾನುಭವಿಗಳಿಗೆ ಯಾವದೇ ಚೆಕ್ ನೀಡಲಾಗುವದಿಲ್ಲ. ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಧಾರ್‍ಕಾರ್ಡ್-ಬ್ಯಾಂಕ್ ಲಿಂಕ್ ಅಗತ್ಯ ಎಂದು ಹೇಳಿದರು.

ಕಾನೂರು, ಕೋತೂರು, ಲಕ್ಕುಂದ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ಕೊರತೆ ಇದೆ. ಲಕ್ಕುಂದ ಶಾಲೆಯಲ್ಲಿ 67 ವಿದ್ಯಾರ್ಥಿಗಳಿಗೆ ಒಬ್ಬರೆ ಶಿಕ್ಷಕರಿದ್ದಾರೆ. 1ನೇ ತರಗತಿಯಿಂದ 7ನೇ ತರಗತಿವರೆಗೆ ಕನಿಷ್ಟ 4 ಮಂದಿ ಶಿಕ್ಷಕರ ಅಗತ್ಯವಿದೆ ಹಾಗೂ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವಾಗ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತಾಗಬೇಕು ಎಂದು ಸದಸ್ಯರಾದ ಸುರೇಶ್ ಮತ್ತು ಕಾಡ್ಯಮಾಡ ಬೋಪಣ್ಣ ಒತ್ತಾಯಿಸಿ ದರು. ಬಾಳೆಲೆ ಕ್ಲಸ್ಟರ್ ಕೇಂದ್ರದ ಸಿಆರ್‍ಪಿ ಚಿಕ್ಕದೇವು ಅವರು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.

ಕಾನೂರು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಅಗತ್ಯವಿರುವಲ್ಲಿ ಟ್ರಾನ್ಸ್‍ಫಾರ್ಮರ್ ಅಳವಡಿಕೆ, 66 ಕೆ.ವಿ.ವಿದ್ಯುತ್ ಮಾರ್ಗ ಮೇಲ್ದರ್ಜೆ ಗೇರಿಸುವ ಅಗತ್ಯ ಹಾಗೂ ವಿದ್ಯುತ್ ಕಂಬಗಳು ಅಳವಡಿಕೆಯಾಗದೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಕುರಿತು ಗ್ರಾಮಸ್ಥರಾದ ಅಳಮೇಂಗಡ ವಿವೇಕ್ ಅವರು ಸೆಸ್ಕ್ ಅಭಿಯಂತರ ಸೋಮೇಶ್ ಗಮನಸೆಳೆದರು.

ಕಾನೂರಿನ ಗದ್ದೆಮಡಿಗಳಲ್ಲಿ ಮಳೆಯ ಅಭಾವದಿಂದ ನೀರಿಲ್ಲದೆ ಬೆಳೆಗಳಲ್ಲಿ ಬೆಂಕಿರೋಗ ಕಂಡು ಬಂದಿದ್ದು, ಬರಗಾಲದ ಛಾಯೆ ಇದೆ. ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಕೃಷಿ ಮಡಿಗಳಲ್ಲಿ ನೀರಿಲ್ಲ. ಈ ಬಗ್ಗೆ ಕೃಷಿ ಇಲಾಖೆ ರೈತರಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಕೃಷಿ ಇಲಾಖಾಧಿಕಾರಿ ಲಿಖಿತ ಅವರನ್ನು ಒತ್ತಾಯಿಸಿದರು.

ಕಾನೂರು ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇಲ್ಲಿ ಕಾಮಗಾರಿ ಮಾಡಲು ಗುತ್ತಿಗೆದಾರರೇ ಸಿಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯೂ ನೆನೆಗುದಿಗೆ ಬಿದ್ದಿರುವ ಆರೋಪ ವ್ಯಕ್ತವಾಯಿತು.

ಇದೇ ಸಂದರ್ಭ 2016-17 ನೇ ಸಾಲಿನಲ್ಲಿ ಒಟ್ಟು 78 ಫಲಾನುಭವಿಗಳಿಗೆ ವಸತಿ ಯೋಜನೆ ಅನುಷ್ಠಾನದ ಬಗ್ಗೆ ಮಾಹಿತಿ ನೀಡಲಾಯಿತು. ಆರ್‍ಟಿಸಿ ಇದ್ದವರಿಗೆ ಮಾತ್ರ ವಿವಿಧ ಯೋಜನೆಗೆ ಆಯ್ಕೆ ಮಾಡಲಾಗುವದು ಎಂದು ಮಾಹಿತಿ ನೀಡಲಾಯಿತು. ಕಾನೂರು ಗ್ರಾ.ಪಂ.ಗೆ ಸ್ವಚ್ಛ ಗ್ರಾಮ ಪುರಸ್ಕಾರ ಲಭ್ಯವಾಗಿದ್ದು ಇದೇ ಸಂದರ್ಭ ಹಲವರು ಅಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಕಾನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 80 ಎಕರೆಗೂ ಅಧಿಕ ಪೈಸಾರಿ ಜಾಗ, ಪ.ಜಾ.-ಪ.ಪಂ.ಜಾಗ ಅತಿಕ್ರಮಣಗೊಂಡಿದ್ದು, ಶೀಘ್ರ ಸರ್ವೆ ಕಾರ್ಯ ನಡೆಸಿ, ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತ್ತಲ್ಲದೆ. ಈ ಬಗ್ಗೆ ಸಮಗ್ರ ಮಾಹಿತಿ ಸಿದ್ಧಪಡಿಸುವಂತೆ ಗ್ರಾಮಲೆಕ್ಕಿಗ ಶ್ರೀಮಂಗಲ ಹೋಬಳಿಯ ದೇವಯ್ಯ ಅವರಿಗೆ ಅಧ್ಯಕ್ಷೆ ಲತಾಕುಮಾರಿ ಸೂಚಿಸಿದರು.

ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಕೊಪ್ಪದ ಗುಡ್ಡೇ ಒಳಗೊಂಡಂತೆ ನೀರಿನ ಓವರ್‍ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಸಾರ್ವಜನಿಕರು ಒತ್ತಾಯಿಸಿದರು. ವಡ್ದಮಲೆ ಪೈಸಾರಿ ನಿವಾಸಿಗಳಿಗೆ ಹಕ್ಕುಪತ್ರವಿಲ್ಲದೆ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿರುವ ಬಗ್ಗೆ ವಿವೇಕ್ ಪ್ರಸ್ತಾಪಿಸಿದರು.

ಲಕ್ಕುಂದ ಬಸ್ ನಿಲ್ದಾಣ, ಅನ್ಯ ವಲಸಿಗರಿಗೆ ಗುರುತಿನ ಚೀಟಿ, ಆಧಾರ್ ಕಾರ್ಡ್ ಅವ್ಯವಹಾರ, ನಂಜಯ್ಯಮಯ್ಯ ಕಾಲೋನಿ ಅಭಿವೃದ್ಧಿ, ದುರ್ಬಲ ವರ್ಗದ ಮನೆಗಳ ದುರಸ್ತಿಗೆ ಗ್ರಾ.ಪಂ. ಅನುದಾನ ಕಲ್ಪಿಸುವ ಬಗ್ಗೆ ವಿವಿಧ ವಿಚಾರ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಹೆಚ್.ಎ. ಗೀತಾ., ತಾ.ಪಂ. ಸದಸ್ಯ ಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಟಿ. ಗಣಪತಿ, ಸದಸ್ಯರಾದ ಶಿಲ್ಪಾ ಅಪ್ಪಣ್ಣ, ಕೆ.ಎಸ್. ನಾಚಪ್ಪ, ಪಿ.ಸಿ. ಚೋಟು, ಬೊಳಚಿ, ಕಾವೇರಿ, ಯರವರ ಅಯ್ಯಪ್ಪ ಮುಂತಾದವರು ಉಪಸ್ಥಿತರಿದ್ದರು. ಪೆÇೀರಂಗಡ ಸೋಮಣ್ಣ, ಗ್ರಾಮಸ್ಥರಾದ ಕೆ.ಎಂ.ದೇವಯ್ಯ, ಬೋಪಣ್ಣ ಮುಂತಾದವರು ಮಾತನಾಡಿದರು.

-ಟಿ.ಎಲ್. ಶ್ರೀನಿವಾಸ್