ವೀರಾಜಪೇಟೆ, ನ. 23: ವೀರಾಜಪೇಟೆ ತಾಲೂಕಿನ ಕಡಂಗ ಮುರೂರು ಗ್ರಾಮದಲ್ಲಿ ಹಿಂದಿನ ರಾಜರ ಕಾಲದಿಂದ ಗುರುತಿಸ ಲಾಗಿರುವ ಸರಕಾರದ ಪೈಸಾರಿಗೆ ಸೇರಿದ ಕಡಂಗ, ತೋಡು, ರಾಜಾಕಾಲುವೆಗಳನ್ನು ಕೆಲವು ತೋಟದ ಮಾಲೀಕರುಗಳು ಒತ್ತುವರಿ ಮಾಡಿಕೊಂಡಿರುವದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ್, ಕಡಂಗ ಗ್ರಾಮದ ಸರ್ವೆ ಸಂಖ್ಯೆ 246, 247/1, 253/1 ಕ್ಕೆ ಹೊಂದಿಕೊಂಡಂತೆ ನಕಾಶೆಯಲ್ಲಿರುವ ಕಡಂಗ, ರಸ್ತೆ, ಕೆರೆ, ರಾಜಾಕಾಲುವೆ, ತೋಡುಗಳನ್ನು ಪಕ್ಕದ ತೋಟ ಮಾಲೀಕರು ಅತಿಕ್ರಮಿಸಿ ಕೊಂಡಿದ್ದಾರೆ. ಸರ್ಕಾರದ ಕಡಂಗ ಸೇರಿದಂತೆ ಪೈಸಾರಿ ಜಾಗಗಳನ್ನು ತೆರವುಗೊಳಿಸಲು ತಾಲೂಕು ಕಚೇರಿಯಲ್ಲಿ ದೂರು ದಾಖಲಿಸಿದರೂ ಯಾವದೇ ಪ್ರಯೋಜನ ಕಾಣಲಿಲ್ಲ. ತಾಲೂಕು ಕಚೇರಿ ಪ್ರಭಾವಿ ಖಾಸಗಿ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿಗಳು ಯಾವದೇ ಕಡತಗಳನ್ನು ವಿಲೇವಾರಿ ಮಾಡದೆ ಸಮಯ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಜಾಗದಲ್ಲಿರುವ ಕಡಂಗವನ್ನು ತೆರವು ಮಾಡಲು ಸಂಸ್ಥೆಯಿಂದ ಒಂದು ವಾರದ ಗಡುವು ನೀಡಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಭ್ರಷ್ಟಾಚಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳ ಜಿಲ್ಲಾ ಉಪಾಧ್ಯಕ್ಷೆ ತೀತಿರ ಚೋಂದಮ್ಮ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮಂತ್ ಮುತ್ತಣ್ಣ, ಕೆ.ಬಿ. ಸೂಫಿ ಉಪಸ್ಥಿತರಿದ್ದರು.