ಮಡಿಕೇರಿ, ನ. 14: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೋಮವಾರಪೇಟೆ ತಾಲೂಕು ಕಾರ್ಯವಾಹ ಹಾಗೂ ವಕೀಲರೂ ಆಗಿರುವ ಐಗೂರಿನ ಪದ್ಮನಾಭ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಧಾಳಿ ನಡೆಸಿ ಹಾನಿಪಡಿಸಿರುವ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಯಿತು.

ರಾಜ್ಯಾದ್ಯಂತ ಮತಾಂಧ ದುಷ್ಕರ್ಮಿಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿರಿಸಿ ಧಾಳಿ ಮಾಡಿ ಹತ್ಯೆಗೆ ಯತ್ನಿಸುತ್ತಿದ್ದು, ಅಂತಹ ಶಕ್ತಿಗಳು ಜಿಲ್ಲೆಯಲ್ಲಿಯೂ ಕಾರ್ಯಾಚರಿಸುತ್ತಿವೆ. ಅಂತಹ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ಇಲಾಖೆ ಯಾವದೇ ಒತ್ತಡಗಳಿಗೆ ಮಣಿಯದೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನಗರದ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಪಿಎಫ್‍ಐ ಹಾಗೂ ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಬಿದ್ದಂಡ ಸುಜಾ, ತಾಲೂಕು ಸಂಚಾಲಕ ಅಜಿತ್, ಬಿಎಂಎಸ್ ಜಿಲ್ಲಾ ಖಜಾಂಚಿ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ಮಡಿಕೇರಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಧನಂಜಯ, ಮಾಜಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತೀಶ್, ಪ್ರಮುಖರಾದ ಮನು ಮಂಜುನಾಥ್, ಗಣೇಶ್, ಕನ್ನಂಡ ಸಂಪತ್, ಮಹೇಶ್, ತಿರುಪತಿ, ಅರುಣ್ ಶೆಟ್ಟಿ ಹಾಗೂ ಇನ್ನಿತರರು ಇದ್ದರು.