ಶನಿವಾರಸಂತೆ, ಸೆ. 13 : ಮುಳ್ಳೂರು, ಮಾಲಂಬಿ, ನಿಡ್ತ, ಜಾಗೇನಹಳ್ಳಿ. ಕಣಿವೆ ಬಸವನಹಳ್ಳಿ, ಮಲ್ಲೇಶ್ವರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಓಣಂ ಹಬ್ಬವನ್ನು ತಾ. 14 ರಂದು (ಇಂದು) ಆಚರಿಸಲಾಗುವದು.
ಹಬ್ಬದ ವಿಶೇಷ : ಹಿಂದೆ ಕೇರಳವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದನೆಂದು ಅವನ ಆಡಳಿತದಲ್ಲಿ ಸುಖ, ಸಂತೋಷ ನೆಮ್ಮದಿಯಿಂದ ಕೂಡಿ ರಾಜ್ಯ ಸಂಪದ್ಬರಿತವಾಗಿತ್ತೆಂದು ಇಂದ್ರ ಪದವಿ ಪಡೆಯುವದಕ್ಕಾಗಿ ಮಹಾಬಲಿ ಯಾಗವೊಂದನ್ನು ಕೈಗೊಂಡಿದ್ದನು. ಆಗ ದೇವತೆಗಳು ಭಯಗೊಂಡು ವಿಷ್ಣುವಿನ ಮೊರೆಹೊಕ್ಕರು ದೇವತೆಗಳ ಬೇಡಿಕೆ ಈಡೇರಿಸುವದಕ್ಕಾಗಿ ಮಹಾವಿಷ್ಣುವು ವಾಮನ ರೂಪವನ್ನು ತಾಳಿ ಮಹಾಬಲಿಯ ಯಾಗಶಾಲೆಯನ್ನು ಪ್ರವೇಶಿಸಿ ತನಗೆ ಮೂರು ಹೆಜ್ಜೆಗಳನ್ನು ಇಡುವಷ್ಟು ಜಾಗವನ್ನು ದಾನ ಮಾಡಬೇಕೆಂದನು ಮಹಾಬಲಿಯು ಒಪ್ಪಿ ಮೂರು ಹೆಜ್ಜೆಗಳನ್ನು ಇಡುವಷ್ಟು ಜಾಗವನ್ನು ಅಳೆಯುವಂತೆ ಸೂಚಿಸಿದಾಗ ವಾಮನ ಮೂರ್ತಿ ವಿಷ್ಣು ತ್ರಿವಿಕ್ರಮನಾಗಿ ಬೆಳೆದು ತನ್ನ ಒಂದು ಹೆಜ್ಜೆಯನ್ನು ಪೃಥ್ವಿಯಲ್ಲೂ ಎರಡನೇ ಹೆಜ್ಜೆಯನ್ನು ನಭೋಮಂಡಲದಲ್ಲಿ ಇಟ್ಟನು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಮಹಾ ವಿಷ್ಣು ಕೇಳಿದನು. ಮಹಾಬಲಿ ಚಕ್ರವರ್ತಿ ಮೂರನೇ ಹೆಜ್ಜೆಯನ್ನು ಇಡಲು ತನ್ನ ಶಿರವನ್ನೇ ಒಡ್ಡುತ್ತಾನೆ. ಮಹಾಬಲಿಯ ನಿಸ್ವಾರ್ಥ ತ್ಯಾಗಕ್ಕೆ ಮೆಚ್ಚಿದ ವಾಮನಮೂರ್ತಿ ಬೇಕಾದ ವರವನ್ನು ಕೇಳಿಕೋ ಎಂದು ಮಹಾಬಲಿಯಲ್ಲಿ ಹೇಳಿದಾಗ ಮಹಾಬಲಿಯು ವರ್ಷಕ್ಕೆ ಒಮ್ಮೆ ತನ್ನ ಪ್ರಜೆಗಳನ್ನು ನೋಡಿ ಹೋಗಲು ಅವಕಾಶ ನೀಡಬೇಕೆಂದು ವರ ಕೇಳಿದನು ಈ ದಿನ ಮಹಾಬಲಿ ಚಕ್ರವರ್ತಿ ಭೂಮಿಗೆ ಬರುವನೆಂಬ ನಂಬಿಕೆಯಿಂದ ಇದೇ ದಿನವಾಗಿ ಇಂದಿಗೂ ಓಣಂ ಹಬ್ಬವನ್ನು ಕೇರಳೀಯರು ಆಚರಿಸುತ್ತಿದ್ದಾರೆ. ಓಣಂ ಹಬ್ಬದ ವಿಶೇಷ ಆಕರ್ಷಣೆ ಎಂದರೆ ಪೂಕಳಂ (ಹೂವಿನ ರಂಗೋಲಿ) ಈ ರಂಗೋಲಿಗೆ ಅದರದೇ ಆದ ಮಹತ್ವವಿದೆ . ಮನೆಯ ಮುಂಭಾಗ ಸುಂದರವಾದ ರಂಗೋಲಿ ಎಲ್ಲರ ಗಮನ ಸೆಳೆಯುತ್ತದೆ. ಓಣಂಗೆ ಹತ್ತು ದಿನ ಮೊದಲೇ ಹೂವಿನ ವಿಧವಿಧದ ರಂಗೋಲಿಯನ್ನು ರಚಿಸಲು ಪ್ರಾರಂಭಿಸುತ್ತಾರೆ. ಪ್ರತಿ ನಿತ್ಯ ವಿಧ ವಿಧದ ಹೂವುಗಳು ಎಲೆಗಳನ್ನು ಉಪಯೋಗಿಸಿ ರಂಗೋಲಿಯನ್ನು ರಚಿಸುತ್ತಾರೆ. ಈ ವ್ಯಾಪ್ತಿಯಲ್ಲಿ ಓಣಂ ಹಬ್ಬದ ಪ್ರಯುಕ್ತ ರಂಗೋಲಿ ಹೆಚ್ಚಿನ ರೀತಿಯಲ್ಲಿ ಜನರನ್ನು ಆಕರ್ಷಿಸುವ ರೀತಿ 10 ನೇ ದಿನ ಈ ರಂಗೋಲಿ ಪೂರ್ಣವಾಗುತ್ತದೆ.
ಓಣಂ ಸದ್ಯ (ಊಟ) ಓಣಂ ಹಬ್ಬದಲ್ಲಿ ಸಂಪೂರ್ಣ ಸಸ್ಯಹಾರದ ಊಟವಾಗಿ ಮನೆಮಂದಿ ಎಲ್ಲಾ ಹೊಸ ಬಟ್ಟೆ ಧರಿಸಿ ಓಣಂ ಊಟವನ್ನು ಒಟ್ಟಿಗೆ ಸವಿಯುತ್ತಾರೆ. ಹಬ್ಬವನ್ನು ಕೇರಳೀಯರು ಮೇಲು ಕೀಳು ಎಂಬ ಭಾವನೆ ಇಲ್ಲದೆ ಒಗ್ಗಟ್ಟಿನಿಂದ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದಾರೆ.
-ಚಿತ್ರ ವರದಿ: ದಿನೇಶ್ ಮಾಲಂಬಿ