ಮಡಿಕೇರಿ, ಜು. 26: ಕಾಂತೂರು - ಮೂರ್ನಾಡು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ)ಯವರು ನಿರಂತರ ರಜೆ ಹಾಕುತ್ತಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಜಯಕರ್ನಾಟಕ ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ಕುಟ್ಟಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂತೂರು - ಮೂರ್ನಾಡು ಪಂಚಾಯಿತಿಯಲ್ಲಿ ಒಂದು ವರ್ಷದಿಂದೀಚೆಗೆ ಸಾರ್ವಜನಿಕರ ಸಂಪರ್ಕಕ್ಕೆ ಸರಿಯಾಗಿ ಸಿಗುತ್ತಿಲ್ಲ.

ಹಲವು ವಾರ್ಡ್ ಸಭೆ, ಗ್ರಾಮ ಸಭೆಗಳಿಗೂ ಹಾಜರಾಗಿಲ್ಲ. ಪಂಚಾಯಿತಿ ಕಾರ್ಯದರ್ಶಿಗಳೂ ಇಲ್ಲದಂತಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ ಹಿರಿಯ ಅಧಿಕಾರಿಗಳು ಕೂಡಲೇ ಅಧಿಕಾರಿಗಳ ನಿಯೋಜನೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ರಾಬಿನ್ ಕುಟ್ಟಪ್ಪ ಹೇಳಿದ್ದಾರೆ.