ಮಡಿಕೇರಿ, ಆ. 27: ಕಾರ್ಮಿಕರ ಭವಿಷ್ಯ ನಿಧಿ ಪಾವತಿಗೆ ಸಂಬಂಧಿಸಿದಂತೆ ನಗರಸಭೆಯ ಬ್ಯಾಂಕ್ ಖಾತೆ ಜಪ್ತಿಯಾಗಿರುವದಕ್ಕೂ, ನಗರಸಭೆಯ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೂ ಯಾವದೇ ಸಂಬಂಧವಿಲ್ಲವೆಂದು ಗುತ್ತಿಗೆದಾರರ ಸಂಘ ಸ್ಪಷ್ಟಪಡಿಸಿದೆ. ಪಿಎಫ್ ಹಣಕ್ಕಾಗಿ ಗುತ್ತಿಗೆದಾರರ ಮೇಲೆ ಒತ್ತಡ ಹೇರಿದರೆ ನಗರದಲ್ಲಿ ಯಾವದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ದಿಲ್ಲವೆಂದು ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ವೈ. ರಾಜೇಶ್, ಪೌರಾಯುಕ್ತರು ಗುತ್ತಿಗೆದಾರರಿಗೆ ನೋಟೀಸ್ ನೀಡಿ ಮಾನಸಿಕ ಹಿಂಸೆ ನೀಡುವದರೊಂದಿಗೆ ಗುತ್ತಿಗೆದಾರರಿಂದ ಬಲವಂತವಾಗಿ ಹಣ ವಸೂಲಾತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಈ ರೀತಿಯ ಒತ್ತಡ ಮುಂದುವರೆದರೆ ನಗರಸಭೆಯ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಡಿಕೇರಿ ನಗರಸಭೆ 2011ರಿಂದ ಕಾರ್ಮಿಕರ ಭವಿಷ್ಯ ನಿಧಿ ಪಾವತಿಸದೆ ಬಾಕಿ ಇರಿಸಿದ್ದು, ಇದೇ ಕಾರಣಕ್ಕೆ ಮೈಸೂರಿನ ಕಾರ್ಮಿಕರ ಭವಿಷ್ಯ ನಿಧಿ ಆಯುಕ್ತರು ನಗರಸಭೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಬರಬೇಕಾದ ಹಣವನ್ನು ಜಪ್ತಿ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.

ಆದರೆ ಇದೀಗ ನಗರಸಭೆಯ ಪೌರಾಯುಕ್ತರು 2011ರಿಂದ ನಗರಸಭೆ ಯಲ್ಲಿ ಕಾಮಗಾರಿ ನಿರ್ವಹಿಸಿರುವ ಸುಮಾರು 32 ಮಂದಿ ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಕಾರ್ಮಿಕರ ಭವಿಷ್ಯ ನಿಧಿಯನ್ನು ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ ಪೂರ್ಣಗೊಂಡಿರುವ ಕಾಮಗಾರಿಯ ಹಣವನ್ನು ಕೂಡ ಪಾವತಿಸುತ್ತಿಲ್ಲ ವೆಂದು ಆರೋಪಿಸಿದರು.

20ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ವರ್ಷದಲ್ಲಿ 240 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಕೆಲಸ ಮಾಡಿಸುವ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಗುತ್ತಿಗೆದಾರರು ಮಾತ್ರ ಭವಿಷ್ಯ ನಿಧಿ ಪಾವತಿಸಬೇಕೆ ನ್ನುವ ನಿಯಮವಿದೆ. ನಗರಸಭೆಯಲ್ಲಿ ತುಂಡು ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ಇದರ ವ್ಯಾಪ್ತಿಗೆ ಬರುವದಿಲ್ಲ. ಒಂದು ವೇಳೆ ಗುತ್ತಿಗೆದಾರರು ಭವಿಷ್ಯ ನಿಧಿ ಕಾಯ್ದೆಯ ವ್ಯಾಪ್ತಿಗೆ ಬರುವದಾದಲ್ಲಿ ಕಾರ್ಮಿಕ ಇಲಾಖೆ ನೋಟೀಸ್ ನೀಡಬೇಕೇ ಹೊರತು ಪೌರಾಯುಕ್ತರಲ್ಲ. ಆದರೆ ಪೌರಾಯುಕ್ತರು ಕಾರ್ಮಿಕ ಇಲಾಖೆಯ ಆದೇಶದ ಮೇರೆಗೆ ನೋಟೀಸ್ ನೀಡುತ್ತಿರುವದಾಗಿ ಉಲ್ಲೇಖಿಸಿದ್ದು, ಆದೇಶದ ಪ್ರತಿಯನ್ನು ಕೇಳಿದರೆ ನೀಡುತ್ತಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ ಮಾತ್ರವಲ್ಲದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ರಾಜೇಶ್ ಆರೋಪಿಸಿದರು.

ರಾಜ್ಯದ ಯಾವದೇ ನಗರಸಭೆ ಗಳಲ್ಲೂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಭವಿಷ್ಯ ನಿಧಿ ಪಾವತಿಸಿದ ಉದಾಹರಣೆಗಳಿಲ್ಲ್ಲ. ಮಡಿಕೇರಿ ನಗರಸಭೆಯ ಈ ಹಿಂದಿನ ಪೌರಾಯುಕ್ತರುಗಳು ಭವಿಷ್ಯ ನಿಧಿಗಾಗಿ ಗುತ್ತಿಗೆದಾರರ ಮೇಲೆ ಎಂದಿಗೂ ಒತ್ತಡ ಹೇರಿಲ್ಲ. ಪ್ರತಿಯೊಂದು ಕಾಮಗಾರಿಯನ್ನು ಕೈಗೆತ್ತಿಕೊಳ್ಳು ವಾಗಲೂ ನಗರಸಭೆ ಗುತ್ತಿಗೆದಾರ ರೊಂದಿಗೆ ಒಪ್ಪಂದ ಪತ್ರವನ್ನು ಮಾಡಿಕೊಳ್ಳುತ್ತದೆ. ಈ ಪತ್ರದಲ್ಲೂ ಭವಿಷ್ಯ ನಿಧಿಯನ್ನು ಗುತ್ತಿಗೆದಾರರು ಪಾವತಿಸಬೇಕೆನ್ನುವ ಉಲ್ಲೇಖವಿಲ್ಲ. ಭವಿಷ್ಯ ನಿಧಿ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಗರಸಭೆಗೆ ನೌಕರರನ್ನು ಪೂರೈಸಿದ ನಾಲ್ಕು ಗುತ್ತಿಗೆ ಸಂಸ್ಥೆಗಳ ಹೆಸರುಗಳನ್ನು ಮಾತ್ರ ಉಲ್ಲೇಖಿಸಲಾಗಿದೆಯೇ ಹೊರತು ಕಾಮಗಾರಿ ನಿರ್ವಹಿಸಿದ ಸ್ಥಳೀಯ ಗುತ್ತಿಗೆದಾರರ ಹೆಸರುಗಳು ಅದರಲ್ಲಿಲ್ಲ.

ಆದರೂ ಇದೀಗ ಗುತ್ತಿಗೆದಾರರು ಕಳೆದ 5 ವರ್ಷಗಳ ಭವಿಷ್ಯ ನಿಧಿ ಪಾವತಿಸಬೇಕೆಂದು ಪೌರಾಯುಕ್ತರು ನೋಟೀಸ್ ನೀಡಿರುವದು ಕಾನೂನು ಬಾಹಿರವಾಗಿದೆ. ಅಲ್ಲದೆ ಈಗಾಗಲೇ ನಿರ್ವಹಿಸಿರುವ ಕಾಮಗಾರಿಯ ಬಿಲ್‍ಗಳನ್ನು ಪಾವತಿಸದೆ ಬಲವಂತ ವಾಗಿ ಭವಿಷ್ಯ ನಿಧಿ ಹಣ ವಸೂಲಾತಿಗೆ ಮುಂದಾಗಿರುವದು ಖಂಡನೀಯ ಕ್ರಮವಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದರ ಜೊತೆಗೆ ನಗರಸಭೆಯ ಎಲ್ಲಾ ಕಾಮಗಾರಿಗಳನ್ನು ಸ್ಥಗಿತ ಗೊಳಿಸಿ ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದರು.

ಸಂಘದ ಪದಾಧಿಕಾರಿ ರವಿ ಕುಮಾರ್ ಮಾತನಾಡಿ ಗುತ್ತಿಗೆದಾರರಿಗೆ ಮಾನಸಿಕ ಹಿಂಸೆ ಹೆಚ್ಚಾಗುತ್ತಿದ್ದು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 36 ಗುತ್ತಿಗೆದಾರರು ಕಾಮಗಾರಿಗಳನ್ನು ನಡೆಸುತ್ತಿದ್ದು, ಗುಣಮಟ್ಟದ ಕಾಮಗಾರಿಗಾಗಿ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುತ್ತಾ ಆಡಳಿತ ವ್ಯವಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡಲಾಗುತ್ತಿದೆ. ಆದರೆ ಇದೀಗ ಪೌರಾಯುಕ್ತರು ತೆಗೆದುಕೊಂಡಿರುವ ಕ್ರಮ ಗುತ್ತಿಗೆದಾರರಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ರವಿಕುಮಾರ್ ತಿಳಿಸಿದರು.

ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಮೊದಲ ಹಂತದಲ್ಲಿ ಬಿಡುಗಡೆಯಾದ ಅನುದಾನದ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದ ಕಾಮಗಾರಿಯೊಂದಿಗೆ ಸ್ಥಳೀಯ ಗುತ್ತಿಗೆದಾರರು ಕೇವಲ 6 ತಿಂಗಳಲ್ಲೇ ಪೂರ್ಣಗೊಳಿಸಿದ್ದಾರೆ. ಆದರೆ ದ್ವಿತೀಯ ಹಂತದ ಗುತ್ತಿಗೆಯನ್ನು ಗ್ಲೋಬಲ್ ಟೆಂಡರ್ ಮೂಲಕ ಹೊರಗಿನವರಿಗೆ ನೀಡಲಾಗಿದ್ದು, ಇದೀಗ ನಾಲ್ಕು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ಕಾಮಗಾರಿಯ ಗುಣಮಟ್ಟವೂ ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೂರನೇ ಹಂತದ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಹಮ್ಮದ್ ಖಲೀಲ್, ಸಲೀಂ, ಫಯಾಜ್ ಹಾಗೂ ಧರ್ಮರಾಜ್ ಉಪಸ್ಥಿತರಿದ್ದರು.