ಮಡಿಕೇರಿ, ಆ. 26: ಹಿಂದೂ ಜಾಗರಣಾ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ತಾ. 14ರಂದು ಕುಶಾಲನಗರದಲ್ಲಿ ನಡೆದ ಪಂಜಿನ ಮೆರವಣಿಗೆಯ ಬಳಿಕ ಗುಡ್ಡೆಹೊಸೂರುವಿನ ಬೆಟ್ಟಗೇರಿ ರಸ್ತೆಯಲ್ಲಿ ದುಷ್ಕರ್ಮಿಗಳಿಂದ ಹಿಂ.ಜಾ.ವೇ. ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆಗೊಳಗಾಗಿದ್ದು, ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಇದೊಂದು ಪೂರ್ವ ನಿಯೋಜಿತವಾದ ಸಂಚಾಗಿದ್ದು, ಈ ಕೃತ್ಯಕ್ಕೆ ಪ್ರವೀಣ್ ಪೂಜಾರಿ ಬಲಿಯಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಮಂದಿ ಬಂಧಿತರಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ.

ಪಿ.ಎಫ್.ಐ. ಸಂಘಟನೆಗೆ ಸೇರಿರುವ ಇಬ್ಬರು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಸೇರಿ 8 ಮಂದಿಯನ್ನು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಕುಶಾಲನಗರ ಉಪವಿಭಾಗದ ಪೊಲೀಸ್ ತಂಡ ಯಶಸ್ವಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದೆ.

ಮಡಿಕೇರಿಯ ಗದ್ದಿಗೆ ಸನಿಹದ ಮಸೀದಿ ಬಳಿ ಪ್ಲಂಬಿಂಗ್ ಮತ್ತು ವಯರಿಂಗ್ ಕೆಲಸ ಮಾಡುತ್ತಿದ್ದ ಎಂ. ಹೆಚ್. ತುಫೈಲ್ (28) ಮೂಲತಃ ಹುಣಸೂರಿನ ವಿ.ವಿ. ಬೋರೆ ದರ್ಗಾ ರಸ್ತೆಯ ನಿವಾಸಿ, ಹಾಲಿ ಮಡಿಕೇರಿಯ ರಾಣಿಪೇಟೆಯಲ್ಲಿ ನೆಲಸಿದ್ದ ಚಾಲಕ ವೃತ್ತಿಯ ನಯಾಜ್ (32), ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ರಸ್ತೆಯಲ್ಲಿನ ಕೂರ್ಗ್ ಸ್ಪೈಸಸ್‍ನಲ್ಲಿ ಕೆಲಸ ಮಾಡುತ್ತಿದ್ದ. ಮೂಲತಃ ಬೆಳ್ತಂಗಡಿ ಉಪ್ಪಿನಂಗಡಿಯ ಮಹಮದ್ ಮುಸ್ತಾಫ (34), ಕುಶಾಲನಗರ ಗೊಂದಿ ಬಸವನಹಳ್ಳಿಯ ನಿವಾಸಿ, ಸಂತೆಯಲ್ಲಿ ಚಪ್ಪಲಿ ವ್ಯಾಪಾರ ಮಾಡುತ್ತಿದ್ದ. ಇಲಿಯಾಸ್ (35) ಹುಣಸೂರಿನ ಎನ್.ಎಸ್. ಕಾಲೋನಿಯ ನಿವಾಸಿ, ಆರ್.ಟಿ.ಓ. ಕಚೇರಿಯಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದ ಇರ್ಫಾನ್ ಅಹಮದ್ (20) ಮೂಲತಃ ಸೋಮವಾರಪೇಟೆ ತಣ್ಣೀರುಹಳ್ಳದ ನಿವಾಸಿ, ಗೊಂದಿ ಬಸವನಹಳ್ಳಿಯಲ್ಲಿ ನೆಲೆಸಿರುವ ಪಿಎಫ್‍ಐ ಜಿಲ್ಲಾ ಕಾರ್ಯದರ್ಶಿ ಟಿ.ಎ. ಹ್ಯಾರಿಸ್ (30),

(ಮೊದಲ ಪುಟದಿಂದ) ಕುಶಾಲನಗರ ಮಾದಾಪಟ್ಟಣದಲ್ಲಿ ಸೇಲ್ಸ್‍ಮ್ಯಾನ್ ಕೆಲಸ ಮಾಡುತ್ತಿದ್ದ ಮುಜೀಬ್ ರೆಹಮಾನ್ (22) ಹಾಗೂ ಗೊಂದಿಬಸವನಹಳ್ಳಿಯ ಬಟ್ಟೆ ವ್ಯಾಪಾರಿ ಷರೀಫ್ (30) ಬಂಧಿತ ಪಾತಕಿಗಳು. ಮತ್ತೋರ್ವ ಆರೋಪಿ ಮಡಿಕೇರಿಯ ಟ್ರ್ಯಾಕ್ ಮೊಬೈಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಮದ್ ಅಫ್ರೀನ್ ಅಲಿಯಾಸ್ ಅಮ್ರಾನ್ ಖಾನ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.

ಬಂಧಿತರನ್ನು ನಿನ್ನೆ ತಡರಾತ್ರಿ ಕುಶಾಲನಗರದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ಆರೋಪಿಗಳಾದ ಟಿ.ಎ. ಹ್ಯಾರಿಸ್, ಮುಜೀಬ್ ರೆಹಮಾನ್ ಹಾಗೂ ಷರೀಫ್ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇತರ ಆರೋಪಿಗಳಾದ ತುಫೈಲ್, ನಯಾಜ್, ಮಹಮದ್ ಮುಸ್ತಾಫ, ಇಲಿಯಾಸ್ ಹಾಗೂ ಇರ್ಫಾನ್ ಅಹಮದ್ ಐದು ದಿನಗಳ ಕಾಲ ಹೆಚ್ಚಿನ ತನಿಖೆಗೆ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಐಜಿಪಿ ಪತ್ರಿಕಾಗೋಷ್ಠಿ

ಇಂದು ಮಡಿಕೇರಿಗೆ ಆಗಮಿಸಿದ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಬಿ.ಕೆ. ಸಿಂಗ್ ಅವರು ಪ್ರಕರಣದ ಬಗ್ಗೆ ವಿವರವಿತ್ತರು. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿರುವ ಒಂದು ಮೋಟಾರ್ ಸೈಕಲ್, ಒಂದು ಆಲ್ಟೋಕಾರು, ಎರಡು ಚಾಕು ಮತ್ತು 10 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ಪೂರ್ವ ಮಾಹಿತಿ

ತಾ. 14ರಂದು ಕುಶಾಲನಗರದಲ್ಲಿ ಹಿಂ.ಜಾ.ವೇ. ವತಿಯಿಂದ ಪಂಜಿನ ಮೆರವಣಿಗೆ ನಡೆದು ಇದರಲ್ಲಿ ಪ್ರವೀಣ್ ಪೂಜಾರಿ ಪಾಲ್ಗೊಂಡಿದ್ದರು. ಬಳಿಕ ತಡ ರಾತ್ರಿ ಇವರು ಆಟೋದಲ್ಲಿ ಹಿಂತಿರುಗುತ್ತಿದ್ದಾಗ ಅವರ ಕೊಲೆ ನಡೆದಿತ್ತು. ಈ ಬಗ್ಗೆ ತನಿಖೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ಈ ತಂಡ ಪಂಜಿನ ಮೆರವಣಿಗೆ ಸಂದರ್ಭ ಮುಸ್ಲಿಂ ಸಂಘಟನೆಗೆ ಸೇರಿದ ಕೆಲವು ವ್ಯಕ್ತಿಗಳು ಕುಶಾಲನಗರದಲ್ಲಿ ಹಾಜರಿದ್ದ ಮಾಹಿತಿ ಕಲೆ ಹಾಕಿದೆ. ಈ ಮಾಹಿತಿಯಂತೆ ದಾಖಲೆಗಳನ್ನು ಆಧರಿಸಿ ಮಡಿಕೇರಿಯ ನಿವಾಸಿ, ಪಿಎಫ್‍ಐ ಕಾರ್ಯಕರ್ತ ತುಫೈಲ್‍ನನ್ನು ಮಡಿಕೇರಿಯಲ್ಲಿ ಮೊದಲು ವಶಕ್ಕೆ ಪಡೆಯಲಾಗಿತ್ತು. ಈತನನ್ನು ವಿಚಾರಣೆಗೊಳ ಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ತುಫೈಲ್ ಪಿಎಫ್‍ಐ ಕಾರ್ಯಕರ್ತನಾಗಿದ್ದು, ತುಫೈಲ್ ಸೂಚನೆಯಂತೆ ಕುಶಾಲನಗರದ ಪಂಜಿನ ಮೆರವಣಿಯ ಕಾರ್ಯಕ್ರಮದ ಬಗ್ಗೆ ಕುಶಾಲನಗರದ ನಿವಾಸಿಗಳಾದ ಮುಜೀಬ್, ಶರೀಫ್, ಹ್ಯಾರೀಸ್ ಮತ್ತು ಇಲಿಯಾಸ್ ಕುಶಾಲನಗರದಲ್ಲಿ ನಡೆಯುವ ಪಂಜಿನ ಮೆರವಣಿಗೆಯ ಸಂದರ್ಭದಲ್ಲಿ ಗಲಭೆ ಮತ್ತು ಮುಸ್ಲಿಂ ಜನಾಂಗದವರನ್ನು ನಿಂದಿಸುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಕುಶಾಲನಗರದಲ್ಲಿ ಅಹಿತಕರ ಚಟುವಟಿಕೆ ನಡೆದರೆ ತಕ್ಕ ಪ್ರತ್ಯುತ್ತರ ನೀಡುವ ಬಗ್ಗೆ ಚರ್ಚಿಸಿದ್ದಾನೆ. ಆರೋಪಿಯು ಈ ವಿಚಾರದಲ್ಲಿ ಮಡಿಕೇರಿ ನಗರದ ಭಟ್ಕಲ್ ಮಸೀದಿ ಸಮೀಪ ತನ್ನ ಸಹಚರರಾದ ನಯಾಜ್, ಮಹಮದ್ ಮುಸ್ತಾಫ ಹಾಗೂ ಅಫ್ರೀನ್ ಎಂಬವರೊಂದಿಗೆ ಸೇರಿ ಚರ್ಚಿಸಿ ತಾನು ಮತ್ತು ಸಹಚರರು ಕುಶಾಲನಗರಕ್ಕೆ ತೆರಳುವ ಬಗ್ಗೆ ತೀರ್ಮಾನಿಸಿ ಆರೋಪಿಯು ನಯಾಜ್‍ನೊಂದಿಗೆ ಆತನ ಮೋಟಾರ್ ಸೈಕಲ್‍ನಲ್ಲಿ ಕುಶಾಲನಗರಕ್ಕೆ ತೆರಳಿದ್ದಾನೆ.

ಅದೇ ಸಂದರ್ಭದಲ್ಲಿ ಅಫ್ರ್ರೀನ್ ಮತ್ತು ಮುಸ್ತಾಫ, ಅಫ್ರ್ರೀನ್‍ಗೆ ಸೇರಿದ ಪಲ್ಸರ್ ಬೈಕ್‍ನಲ್ಲಿ ತೆರಳಿದ್ದು, ಕುಶಾನಗರಕ್ಕೆ ಸಂಜೆ 6.45ಗಂಟೆಗೆ ತಲುಪಿ ಮುಜೀಬ್‍ನನ್ನು ಭೇಟಿ ಮಾಡಿ ಕುಶಾನಗರದ ಸಿಟಿ ಸೆಂಟರ್ ಸಮೀಪ ಉಳಿದ ಸಹಚರರೊಂದಿಗೆ ಕಾದಿದ್ದರು. ಸಂಜೆ 8.30 ಗಂಟೆ ಸಮಯದಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯಾರೋ ಕಿಡಿಗೇಡಿಗಳು ಬಿಲಾಲ್ ಮಸೀದಿಯ ಮುಂಭಾಗದಲ್ಲಿರುವ ಆದರ್ಶ ಟೆಕ್ಸ್ ಟೈಲ್ಸ್‍ನ ಗಾಜಿಗೆ ಕಲ್ಲು ತೂರಿದ್ದು, ಕುಶಾಲನಗರ ನಿವಾಸಿ ಶರೀಫ್ ಮತ್ತು ಹ್ಯಾರೀಸ್ ಈ ಬಗ್ಗೆ ದೂರವಾಣಿಯಲ್ಲಿ ಮಸೀದಿಗೆ ಕಲ್ಲು ಬಿದ್ದರೂ ನೀವು ಏನೂ ಮಾಡುತ್ತಿಲ್ಲ ಎಲ್ಲಿದ್ದೀರಿ ಎಂದು ಕೇಳಿ ಸಿಟಿ ಸೆಂಟರ್‍ಗೆ ಬರಲು ತಿಳಿಸಿದ್ದು, ಅಲ್ಲೇ ಇದ್ದ ಎಲ್ಲರೂ ಸಿಟಿ ಸೆಂಟರ್‍ನಲ್ಲಿ ಸೆಲ್ಲರ್‍ನಲ್ಲಿ ಸೇರಿ ಮಸೀದಿಗೆ ಕಲ್ಲು ತೂರಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹಾಗೆಯೇ ಬಿಡಬಾರದು. ಏನಾದರೂ ಕೃತ್ಯ ಎಸಗಬೇಕೆಂದು ನಿರ್ಧರಿಸಿ, ತುಫೈಲ್ ತನ್ನ ಕೈಯಲ್ಲಿದ್ದ ಎರಡು ಚಾಕುಗಳನ್ನು ನಯಾಜ್ ಮತ್ತು ಮುಸ್ತಾಫ ಅವರಿಗೆ ನೀಡಿದ್ದಾನೆ. ತದನಂತರ ಅವರುಗಳು ಕುಶಾನಗರದಿಂದ ಗುಡ್ಡೆಹೊಸೂರು ಜಂಕ್ಷನ್‍ಗೆ ಬಂದು ಹೊಂಚು ಹಾಕುತ್ತಿದ್ದಾಗ ಅಲ್ಲಿ ವಿಪರೀತ ವಾಹನ ಸಂಚಾರ ಇದ್ದುದರಿಂದ ಸಿದ್ದಾಪುರ ರಸ್ತೆಗೆ ತೆರಳಿ ಯಾರಾದರೂ ಹಿಂದೂ ಕಾರ್ಯಕರ್ತರನ್ನು ಹಲ್ಲೆಗೈಯುವ ವಿಚಾರದಲ್ಲಿ ಮೊದಲೇ ಸಂಚು ರೂಪಿಸಿದ್ದರು. ಎರಡು ಮೋಟಾರ್ ಸೈಕಲ್‍ಗಳಲ್ಲಿ ಐದು ಜನರು ಹೊರಟು ಸಿದ್ದಾಪುರ ಕಡೆ ತೆರಳುತ್ತಿರುವಾಗ ಬೆಟ್ಟಗೇರಿ ಸಮೀಪ ಆಟೋ ರಿಕ್ಷಾವೊಂದು ರಿವರ್ ವ್ಯೂ ಹೋಂ ಸ್ಟೇ ನಿಂದ ಪ್ರಯಾಣಿಕರನ್ನು ಇಳಿಸಿ ಮರಳಿ ವಿರುದ್ಧ ದಿಕ್ಕಿನಲ್ಲಿ ದಾಟಿದ್ದು, ಹಿಂದೆ ಪೂಜಾರಿ ಎಂದು ಬರೆದುದನ್ನು ಗಮನಿಸಿ ಇದೇ ಸರಿಯಾದ ಗುರಿ ಎಂದು ಆಟೋ ರಿಕ್ಷಾವನ್ನು ಹಿಂದಿಕ್ಕಿ ಅವರಲ್ಲಿ ರಸ್ತೆ ಎಲ್ಲಿಗೆ ತೆರಳುತ್ತದೆಯೆಂದು ವಿಚಾರಿಸುವ ನೆಪದಲ್ಲಿ ಆಟೋ ರಿಕ್ಷಾ ಸಮೀಪ ತೆರಳಿ ಮೂರು ಜನ ಆರೋಪಿಗಳು ಆಟೋ ಚಾಲಕ ಪ್ರವೀಣ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೈದು ರಸ್ತೆಯಲ್ಲಿ ಬರುತ್ತಿದ್ದ ಬೇರೆ ವಾಹನಗಳ ಬೆಳಕಿನಿಂದ ಗಲಿಬಿಲಿಗೊಂಡು ಸಿದ್ದಾಪುರ ಕಡೆಗೆ ಪಲಾಯನಗೈದಿರುವದಾಗಿ ಐಜಿಪಿ ಬಿ.ಕೆ. ಸಿಂಗ್ ಗೋಷ್ಠಿಯಲ್ಲಿ ವಿವರ ವಿತ್ತರು.

ಎಸ್‍ಪಿ ರಾಜೇಂದ್ರ ಪ್ರಸಾದ್, ಕುಶಾನಗರದ ಡಿವೈಎಸ್‍ಪಿ ಕುಮಾರ್ ಮಾರ್ಗದರ್ಶನದಲ್ಲಿ ಪತ್ತೆಕಾರ್ಯದ ತಂಡದಲ್ಲಿ ಡಿಸಿಐಬಿ ನಿರೀಕ್ಷಕ ಬಿ.ಆರ್. ಲಿಂಗಪ್ಪ, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ, ತನಿಖಾಧಿಕಾರಿ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೇಗೌಡ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್, ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‍ಐ ಎ.ಪಿ. ಸೀತರಾಮ, ಡಿಸಿಐಬಿ ಸಿಬ್ಬಂದಿಯವರಾದ ಎಎಸ್‍ಐ ಹಮೀದ್, ಹೆಚ್‍ಸಿಗಳಾದ ತಮ್ಮಯ್ಯ, ವೆಂಕಟೇಶ್, ಅನಿಲ್, ಪಿಸಿಗಳಾದ ಯೋಗೇಶ್ ಕುಮಾರ್, ನಿರಂಜನ, ವಸಂತ, ಶಶಿಕುಮಾರ್, ಮಹೇಶ್, ರಾಜೇಶ್, ಗಿರೀಶ್, ಜೋಸ್ ನಿಶಾಂತ್, ಸುನಿಲ್ ಕುಮಾರ್, ಸಿದ್ದಾರ್ಥ, ಸುಂಟಿಕೊಪ್ಪ ಠಾಣೆಯ ಪುಂಡರಿಕಾಕ್ಷ, ರವಿ ಕುಶಾಲನಗರ ಠಾಣೆಯ ಜೋಸೆಫ್, ಸಂಪತ್ ರೈ ಪಾಲ್ಗೊಂಡಿದ್ದು, ಇವರ ಬಗ್ಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರೂ. 1ಲಕ್ಷ ಬಹುಮಾನ

ಕೋಮು ಸೂಕ್ಷ್ಮತೆಯಿಂದ ಕೂಡಿದ್ದ ಈ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಕಾರ್ಯಾಚರಣೆ ತಂಡ ಸತತ ಪ್ರಯತ್ನದಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ತಂಡವನ್ನು ಶ್ಲಾಘಿಸಿದ್ದು, ರೂ.1 ಲಕ್ಷ ಬಹುಮಾನ ಘೋಷಣೆ ಮಾಡಿರುವದಾಗಿ ಬಿ.ಕೆ. ಸಿಂಗ್ ತಿಳಿಸಿದರು. ಗೋಷ್ಠಿಯಲ್ಲಿ ಎಸ್‍ಪಿ ರಾಜೇಂದ್ರ ಪ್ರಸಾದ್ ಹಾಜರಿದ್ದರು.