ಮಡಿಕೇರಿ ಜ. 9: ಪಾಲೇಮಾಡು ಕಾನ್ಶಿರಾಂ ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಹಾಗೂ ಸ್ಮಶಾನದ ಜಾಗವನ್ನು ಗುರುತಿಸಿ ಸರ್ವೆ ಕಾರ್ಯವನ್ನು ಮುಂದಿನ 15 ದಿನಗಳ ಒಳಗೆ ನಡೆಸಬೇಕೆಂದು ಒತ್ತಾಯಿಸಿರುವ ಬಹುಜನ ಕಾರ್ಮಿಕರ ಸಂಘ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆÉ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ, ಸುಮಾರು 40 ಶವಗಳನ್ನು ಸಂಸ್ಕಾರ ಮಾಡಿದ ಜಾಗವನ್ನೆ ಸ್ಮಶಾನದ ಜಾಗವೆಂದು ಗುರುತಿಸಿ ಸರ್ವೇ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು. ಸ್ಮಶಾನದ ಜಾಗವನ್ನು ಕ್ರೀಡಾಂಗಣಕ್ಕಾಗಿ ಮಂಜೂರು ಮಾಡಲಾಗಿದೆ, ಆದರೆ ಸ್ಮಶಾನದ ಜಾಗ ಎನ್ನುವದಕ್ಕೆ ಆರ್‍ಟಿಸಿ ನಮ್ಮ ಬಳಿ ಇದೆ. ಆರ್‍ಟಿಸಿ ದುರಸ್ತಿ ಕಾರ್ಯ ಮಾಡದಿರುವದು ಅಧಿಕಾರಿಗಳ ತಪ್ಪೆಂದು ಆರೋಪಿಸಿದ ಅವರು, ಕಳೆದ 10 ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಿದ್ದರೂ ಜಾಗ ಮಂಜೂರಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಶವವಿಟ್ಟು ಪ್ರತಿಭಟನೆ ನಡೆಸಿದ ಸಂದರ್ಭ ಒಂದು ತಿಂಗಳ ಒಳಗೆ ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಲಭ್ಯ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಆದರೆ, ಅಧಿಕಾರಿಗಳು ಸರ್ವೇ ಕಾರ್ಯವನ್ನು ಮಂದಗತಿಯಲ್ಲಿ ನಡೆಸುತ್ತಿದ್ದು, ಇದು ಹಲವು ಸಂಶಯಗಳಿಗೆ ಕಾರಣವಾಗಿದೆಯೆಂದು ಆರೋಪಿಸಿದರು. ಕೆಲವು ಸಿಬ್ಬಂದಿಗಳು, ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಹಾದಿ ತಪ್ಪಿಸುವ ಕಾರ್ಯ ಮಾಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ ವರ್ಗವನ್ನು ಗುಲಾಮರಂತೆ ನಡೆಸಿಕೊಳ್ಳಲು ಕೆಲವು ಜಾತಿ ಸಂಘÀಟನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಲೆಮಾಡು ಪೈಸಾರಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಸಹಿಸಲಾಗದ ಪ್ರಭಾವಿ ರಾಜಕಾರಣಿಗಳು ಮತ್ತು ಬಂಡವಾಳಶಾಹಿಗಳು ಹೋರಾಟ ಗಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮೊಣ್ಣಪ್ಪ ಆರೋಪಿಸಿದರು. ಪಾಲೆಮಾಡು ನಿವಾಸಿಗಳಿಗೆ ಹಾಗೂ ಹೋರಾಟಗಾರರಿಗೆ ಏನಾದರು ಅಪಾಯಗಳು ಸಂಭವಿಸಿದಲ್ಲಿ ಸಂಬಂಧಿಸಿದ ವ್ಯಕ್ತಿಗಳೆ ನೇರ ಹೊಣೆಗಾರರೆಂದು ಎಚ್ಚರಿಸಿದರು.

ಹೊದ್ದೂರು ಪಂಚಾಯ್ತಿ ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿ, ಪಾಲೆಮಾಡು ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಿಸುವದಕ್ಕೆ ಆಕ್ಷೇಪವಿಲ್ಲ. ಆದರೆ, ಸ್ಮಶಾನದ ಜಾಗ ಬಿಟ್ಟುಕೊಡಲಿ ಎಂದರು. ಗ್ರಾಮ ಪಂಚಾಯ್ತಿಯಲ್ಲಿ ತಾವು ಕಾರ್ಯ ನಿರ್ವಹಿಸಲು ಕೆಲವು ಸದಸ್ಯರುಗಳು ಅಡ್ಡಿ-ಆತಂಕಗಳನ್ನು ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲೆಮಾಡು ಕಾನ್ಶಿರಾಂ ನಗರದ ಭೀಮ್ ಸೇನಾ ಸಂಘಟನೆಯ ಪ್ರಮುಖರಾದ ದಿವಾಕರ್, ಆಶಿಕ್ ಮೌರ್ಯ ಹಾಗೂ ಎನ್. ರಂಜಿತ್ ಮೌರ್ಯ ಉಪಸ್ಥಿತರಿದ್ದರು.