ಮಡಿಕೇರಿ, ಜ. 3 :ಪಾಲೇಮಾಡು ಪೈಸಾರಿಯಲ್ಲಿ ವಿನಾಃಕಾರಣ ಸ್ಮಶಾನ ಜಾಗದ ವಿವಾದವನ್ನು ಸೃಷ್ಟಿಸುವ ಮೂಲಕ ಕೆಲವು ಮುಖಂಡರು ಸ್ಥಳೀಯರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಪಾಲೇಮಾಡು ನಾಗರಿಕ ಹಿತರಕ್ಷಣಾ ಸಮಿತಿ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಜನಾರ್ಧನ, ಪಾಲೇಮಾಡಿನಲ್ಲಿ ಸುಮಾರು 12.70 ಎಕರೆಯಷ್ಟು ಜಾಗವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗೆ 2012ರಲ್ಲಿ ಮಂಜೂರು ಮಾಡಿರುವ ವಿಚಾರ ಹೋರಾಟ ನಡೆಸುತ್ತಿರುವ ಮುಖಂಡರಿಗೆ ತಿಳಿದಿದ್ದರೂ ಸ್ಥಳೀಯ ನಿವಾಸಿಗಳ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡ ರೀತಿಯಲ್ಲೇ ಸ್ಮಶಾನವನ್ನು ಕೂಡ ಅಕ್ರಮವಾಗಿಯೇ ಗುರುತಿಸಿಕೊಳ್ಳಲಾಗಿತ್ತೇ ಹೊರತು ಸರಕಾರದಿಂದ ಯಾವದೇ ಮಂಜೂರಾತಿ ದೊರೆತಿಲ್ಲ. ಇದೀಗ ವಾಟೆಕಾಡು ಪೈಸಾರಿಯಲ್ಲಿ ಸರ್ವೆ ಸಂ.167/1 ಎ ಯಲ್ಲಿ 3 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದೆ. ಅಲ್ಲದೆ ಸ್ಥಳೀಯ ಗ್ರಾ.ಪಂ. ಬೇಲಿ ನಿರ್ಮಿಸಿ ಕೊಡುವ ಭರವಸೆ ನೀಡಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳದೆ ಪಾಲೇಮಾಡಿನಲ್ಲಿ ಕ್ರೀಡಾಂಗಣಕ್ಕಾಗಿ ಮೀಸಲಿಟ್ಟಿರುವ ಜಾಗವೇ ಬೇಕೆಂದು ಹೋರಾಟಗಳನ್ನು ನಡೆಸುವದು ಅರ್ಥಹೀನವೆಂದು ಜನಾರ್ಧನ ತಿಳಿಸಿದರು. ಕ್ರೀಡಾಂಗಣಕ್ಕೆ ಸಂಬಂಧಿಸಿದ ಜಾಗ ಹೊರತುಪಡಿಸಿ ದಂತೆ ಬಡವರು ವಾಸಿಸುತ್ತಿರುವ ಜಾಗಕ್ಕೆ ಅಡ್ಡಿ ಆತಂಕಗಳು ಎದುರಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಎಂಟು ವರ್ಷಗಳಿಂದ ವಿವಿಧ ಜನಾಂಗಗಳ 250 ರಿಂದ 300 ಕುಟುಂಬಗಳು ಪಾಲೇಮಾಡು ಪೈಸಾರಿಯಲ್ಲಿ ವಾಸಿಸುತ್ತಿದ್ದು, ಬಹುತೇಕರು ಜಿಲ್ಲಾಡಳಿತ ವಾಟೆಕಾಡು ಪ್ರದೇಶದಲ್ಲಿ ಮಂಜೂರು ಮಾಡಿರುವ ಸ್ಮಶಾನದ ಜಾಗಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ ಒಂದು ಗುಂಪಿನ ಮಂದಿ ಮಾತ್ರ ಮುಖಂಡರೆನಿಸಿಕೊಂಡವರ ಮಾತು ಕೇಳಿ 3 ದಿನ ಶವವಿಟ್ಟು ಪ್ರತಿಭಟನೆ ನಡೆಸಿರುವದು ಅಮಾನವೀಯ ವೆಂದರು.
ಪ್ರತಿಭಟನೆ ಸಂದರ್ಭ ಬೆಂಗಳೂರಿನಿಂದ ಪಾಲೇಮಾಡಿಗೆ ಆಗಮಿಸಿದ್ದ ಮುನಿಯಪ್ಪ ಎಂಬವರು ಸ್ಮಶಾನದ ಜಾಗದ ಬಗ್ಗೆ ಭಾಷಣ ಮಾಡದೆ ಇತರ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಪ್ರಚೋದನೆ ನೀಡಿದ್ದಾರೆ. ಅಲ್ಲದೆ ಅಯ್ಯಪ್ಪ ವ್ರತಧಾರಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಜನಾರ್ಧನ ಪಾಲೇಮಾಡಿನ ಜನರಿಗಾಗಿ ಏನನ್ನೂ ಮಾಡಲಾಗದ ಮುನಿಯಪ್ಪ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ವರ್ತಿಸಿದ ರೀತಿ ಖಂಡನೀಯವೆಂದರು.
ಕ್ರೀಡಾಂಗಣಕ್ಕಾಗಿ ಸರಕಾರ ಮಂಜೂರು ಮಾಡಿರುವ ಜಾಗದಲ್ಲೇ ಕ್ರೀಡಾಂಗಣ ನಿರ್ಮಾಣವಾಗಬೇಕೆಂದ ಅವರು ವಾಟೆಕಾಡಿನಲ್ಲಿ ಸ್ಮಶಾನಕ್ಕಾಗಿ ಮಂಜೂರಾಗಿರುವ ಜಾಗ ಪಾಲೇಮಾಡು ಜನರಿಗೆ ಅನುಕೂಲಕರವಾಗಿಯೇ ಇದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಕಾರ್ಯ ದರ್ಶಿ ನಂದ, ಪ್ರಮುಖರಾದ ಗೌತಮ್, ಜಗದೀಶ್ ಹಾಗೂ ಗಿರೀಶ್ ಉಪಸ್ಥಿತರಿದ್ದರು.