ನಾಪೋಕ್ಲು, ನ. 27: ಉತ್ತು-ಬಿತ್ತಿ ಹಲವು ಸಂಕಷ್ಟಗಳ ಗಡಿದಾಟಿ ಭತ್ತ ಬೆಳೆದ ಅನ್ನದಾತ ಇದೀಗ ಮಂದಹಾಸ ಬೀರಿ ಬೆಳೆದು ನಿಂತ ಭತ್ತದ ಕೊಯ್ಲಿಗೆ ಮುಂದಾಗಿದ್ದಾನೆ. ಹಿಂದೆ ಕೊಡಗಿನ ಹುತ್ತರಿ ಹಬ್ಬ ಕಳೆದ ಬಳಿಕ ಭತ್ತದ ಬೆಳೆ ಕೊಯ್ಲಿಗೆ ಬರುತ್ತಿತ್ತು. ಇದೀಗ ಹೊಸ ತಳಿಗಳಿಗೆ ಮಾರುಹೋಗಿರುವದರಿಂದ ಬೆಳೆ ಕೊಯ್ಲಿಗೆ ಬಂದಿದೆ.

ಪಾಲೂರು ಗ್ರಾಮದಲ್ಲಿ ಬೆಳೆ ಕಟಾವು ಕಾರ್ಯ ಭರದಿಂದ ಸಾಗಿದೆ. ಈ ಹಿಂದೆ ಸಾಂಪ್ರದಾಯಿಕ ಬೇಸಾಯ ಮಾಡುತ್ತಿದ್ದು, ಬಹುತೇಕ ರೈತರು ಇದೀಗ ಕೃಷಿ ಇಲಾಖೆಯಿಂದ ದೊರಕುವ ವಿವಿಧ ಬಿತ್ತನೆ ಬೀಜಗಳನ್ನು ಬಿತ್ತಿರುವದರಿಂದ ಈ ವರ್ಷ ಬಹಳ ಬೇಗ ಕಟಾವಿಗೆ ಬಂದಿದೆ. ಭತ್ತ ಒಣಗಿದ್ದರೂ ಹುಲ್ಲು ಹಸಿಯಾಗಿರುವದರಿಂದ ಕೊಯ್ಲು ಮಾಡಿ ಒಣಗಲು ಗದ್ದೆಯಲ್ಲಿ ಬಿಟ್ಟಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ಬಿಳಿಯ, ದೊಡ್ಡಿ, ರಾಜಮುಡಿ, ಬೀಟಿ ಮತ್ತಿತರ ತಳಿಗಳನ್ನು ಈ ಹಿಂದೆ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಇಲಾಖೆಯಿಂದ ದೊರಕುವ ಹೊಸ ತಳಿಗಳಿಗೆ ಮಾರುಹೋಗಿರುವದರಿಂದ ಈ ವರ್ಷ ಬಹಳ ಬೇಗ ಕಟಾವಿಗೆ ಬಂದಿದೆ

- ದುಗ್ಗಳ ಸದಾನಂದ