ಮಡಿಕೇರಿ, ಡಿ.31: ಪರಿಸರ ಸ್ನೇಹಿ ಪ್ರವಾಸೋದ್ಯಮ ಘಟಕ ಸ್ಥಾಪನೆಗೆ ಒತ್ತು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು. ಪ್ರವಾಸೋದ್ಯಮ ಘಟಕ ಸ್ಥಾಪಿಸುವ ಸಂಬಂಧ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಪರಿಶೀಲನಾ ಕಾರ್ಯವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಪ್ರವಾಸೋದ್ಯಮ ನೀತಿಯಡಿಯಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೆ ಅನುಮೋದನೆ ನೀಡುವ ವಿಶೇಷ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಹಲವು ಮಾಹಿತಿ ಪಡೆದರು.

ಪ್ರವಾಸೋದ್ಯಮ ನೀತಿಯಡಿಯಲ್ಲಿ ಅನುಮೋದನೆ ಪಡೆಯುವ ವಿವಿಧ ಪ್ರವಾಸಿ ಘಟಕ ಅಥವಾ ರೆಸಾರ್ಟ್‍ಗಳ ಸ್ಥಾಪನೆಯ ಸಂದರ್ಭದಲ್ಲಿ ಪರಿಸರದ ಮೇಲಿನ ಕಾಳಜಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿನ ಪ್ರವಾಸಿ ಘಟಕಗಳ ಸ್ಥಾಪನೆಯ ಸಂದರ್ಭಗಳಲ್ಲಿ ಮರ-ಗಿಡಗಳನ್ನು ಸಂರಕ್ಷಿಸುವುದು, ಜೊತೆಗೆ ತ್ಯಾಜ್ಯ ವಿಲೇವಾರಿ ಘಟಕ ಸಂಸ್ಕರಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ರಾಜ್ಯದಲ್ಲಿ ಪ್ರವಾಸೋದ್ಯಮ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಇಚ್ಚಿಸುವ ಅರ್ಹ ಸಂಸ್ಥೆಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಹೂಡಿಕೆ ಸಹಾಯಧನವನ್ನು ನೀಡಲು ಸರ್ಕಾರ ಉದ್ದೇಶಿಸಿದ್ದು, ಈ ಬಗ್ಗೆ ಅರ್ಹ ಉದ್ಯಮದಾರರಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಾಗಿ ರೆಸಾರ್ಟ್, ಹೋಮ್ ಸ್ಟೇ ಆರಂಭಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಬೇಕಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಘಟಕಗಳಿಗೆ ಪರವಾನಿಗೆ ನೀಡುವ ಮೊದಲು ಸ್ಥಳ ಪರಿಶೀಲನೆ ನಡೆಸುವದು ಅಗತ್ಯ. ಯೋಜನೆ ಅನುಮೋದನೆ ನೀಡುವದಕ್ಕೂ ಮೊದಲು ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್ ಅವರು ಇಲ್ಲಿಯವರೆಗೆ ಸುಮಾರು 9 ಪ್ರಸ್ತಾವನೆಗಳು ಸಲ್ಲಿಕೆಯಾಗಿದೆ .

ಪ್ರವಾಸೋದ್ಯಮ ನೀತಿಯ ರಿಯಾಯಿತಿಗಳು ಮತ್ತು ಹೂಡಿಕೆ ಸಹಾಯಧನವನ್ನು ಅರ್ಹ ಪ್ರವಾಸೋದ್ಯಮ ಘಟಕಗಳಿಗೆ ನೀಡಲಾಗುತ್ತಿದೆ. ಜೊತೆಗೆ ತೆರಿಗೆ, ಶುಲ್ಕ ರೂಪದಲ್ಲಿರುತ್ತದೆ.

ಪ್ರವಾಸೋದ್ಯಮ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಗಳಿಗೆ ಸ್ಟಾಂಪ್ ಶುಲ್ಕದ ಮೇಲೆ, ನೋಂದಣಿ ಶುಲ್ಕ, ಭೂ ಪರಿವರ್ತನ ಶುಲ್ಕ, ಬಡ್ಡಿ ರಹಿತ ಸಾಲ, ರಿಯಾಯಿತಿ, ಪ್ರವೇಶ ತೆರಿಗೆ, ವಿಲಾಸಿ ತೆರಿಗೆಗಳ ಮೇಲೆ ವಿನಾಯಿತಿಗಳನ್ನು ಪ್ರವಾಸೋದ್ಯಮ ನೀತಿ ಅನ್ವಯ ನೀಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ. ದೇವಯ್ಯ, ನಗರ ಮತ್ತು ಗ್ರಾಮಾಂತರ ಯೊಜನಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ, ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ಮಹೇಶ, ಸೆಸ್ಕ್ ಎಇಇ ರಮೇಶ್, ನಗರಸಭೆಯ ಆರೋಗ್ಯ ಘಟಕದ ಪರಿವೀಕ್ಷಕ ರಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಾಯಕ ನಿರ್ದೇಶಕ ಸಬೀರ್ ಭಾಷಾ ಇತರರು ಹಾಜರಿದ್ದರು.