ಮೂರ್ನಾಡು, ನ. 19: ಕೇಂದ್ರ ಸರ್ಕಾರ ಅನೇಕ ಜನಪರ ಸೌಲಭ್ಯಗಳನ್ನು ಒದಗಿಸುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ಚೂರಿಕಾಡುವಿನಲ್ಲಿ ಮಲೆನಾಡು ಅಭಿವೃದ್ಧಿ ನಿಗಮದಿಂದ 5 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ ಇಂದು ಮುದ್ರಾ ಯೋಜನೆಯಡಿಯಲ್ಲಿ ಶಿಶು, ಕಿಶೋರ್, ತರುಣ್ ಎಂಬ ಜಾಮೀನು ರಹಿತ ಸಾಲ ನೀಡುತ್ತಿದೆ. ದುರ್ಬಲ ವರ್ಗದವರು ಇವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುವಂತಾಗ ಬೇಕು. ಕೇಂದ್ರ ಸರ್ಕಾರ ನೋಟ್ ರದ್ದು ಪಡಿಸಿರುವದರಿಂದ ಭಯ ಪಡುವ ಅವಶ್ಯಕತೆ ಇಲ್ಲ. ನೋಟಿನ ರದ್ಧತಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ಕಂಡುಕೊಳ್ಳ ಬಹುದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಹರೀಶ್, ತಾಲೂಕು ಪಂಚಾಯಿತಿ ಸದಸ್ಯೆ ಕುಮುದ ರಶ್ಮಿ, ಹಾಕತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂದ್ರೀರ ಶಾರದ, ಉಪಾಧ್ಯಕ್ಷ ವಿಷ್ಣು ಕುಮಾರ್, ಪಿಡಿಓ ಸಬಾಸ್ಟಿನ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಪಿ. ಸುಕುಮಾರ್, ಕಾರ್ಯದರ್ಶಿ ಕೆ.ಎಂ. ಮೋಹನ್, ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಕಾಯೇರ ಬೆಳ್ಯಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಜಿ.ಪಂ. ವತಿಯಿಂದ 10 ಲಕ್ಷ ರೂ ವೆಚ್ಚದಲ್ಲಿ ಕಗ್ಗೋಡ್ಲುವಿನಲ್ಲಿ ನಿರ್ಮಾಣಗೊಂಡ ನೀರಿನ ಘಟಕದ ಉದ್ಘಾಟನೆ ನೆರವೇರಿಸಲಾಯಿತು. ತಾಲೂಕು ಪಂಚಾಯಿತಿ ಅನುದಾನ ದಿಂದ ಹಾಕತ್ತೂರು ತೊಂಭತ್ತು ಮನೆಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಾಸಕರ ನಿಧಿಯಿಂದ ತ್ರಿನೇತ್ರ ಯುವಕ ಸಂಘಕ್ಕೆ 2 ಲಕ್ಷ ಮತ್ತು ಚೂರಿಕಾಡುವಿನಲ್ಲಿ ಬೋರ್ವೆಲ್ ನಿರ್ಮಾಣಕ್ಕೆ ರೂ. 1 ಲಕ್ಷ ಅನುದಾನ ಒದಗಿಸಿದರು.