ಸೋಮವಾರಪೇಟೆ, ಜ. 28: ಯಾವದೇ ಒಬ್ಬ ವ್ಯಕ್ತಿಯ ಭವಿಷ್ಯ ಆತನ ಧರ್ಮ, ಜಾತಿಯ ಮೇಲೆ ಅವಲಂಬಿತವಾಗಿಲ್ಲ. ಆತನ ಪರಿಶ್ರಮದ ಮೇಲೆಯೇ ಭವಿಷ್ಯ ನಿಂತಿರುತ್ತದೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಿವಿಮಾತು ಹೇಳಿದರು.ಇಲ್ಲಿನ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಹಾಗೂ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸ ಲಾಗಿರುವ ಶಾಲಾ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಕಲಿಕೆಯ ಹಂತದಲ್ಲಿಯೇ ಪರಿಶ್ರಮದೊಂದಿಗೆ ಶ್ರದ್ಧೆಯನ್ನು ಮೈಗೂಡಿಸಿಕೊಂಡಲ್ಲಿ ಸಾಧನೆ ಸಾಧ್ಯ. ವಿದ್ಯೆಗೆ ಬಡತನ ಎಂದಿಗೂ ಅಡ್ಡಗಾಲು ಆಗುವದಿಲ್ಲ. ಕಲಿಯುವ ಛಲವಿದ್ದರೆ ಎಲ್ಲವೂ ಸಾಧ್ಯ. ಹಣದ ಹಿಂದೆ ವಿದ್ಯೆ ಎಂದಿಗೂ ಹೋಗುವದಿಲ್ಲ. ವಿದ್ಯೆಯ ಹಿಂದೆಯೇ ಹಣ ಬರುತ್ತದೆ. ವಿದ್ಯಾರ್ಥಿಗಳು ಶಿಸ್ತಿನ ಜೀವನ ಮೈಗೂಡಿಸಿಕೊಂಡು ಮುಂದಡಿಯಿಡಬೇಕು ಎಂದು ಕರೆ ನೀಡಿದರು.

ರೂ. 30 ಲಕ್ಷ ಅನುದಾನ: ಎಂಎಲ್‍ಸಿ ಸುನಿಲ್

ಕುವೆಂಪು ವಿದ್ಯಾಸಂಸ್ಥೆಗೆ ತನ್ನ ಅವಧಿಯ 6 ವರ್ಷದಲ್ಲಿ ಒಟ್ಟು 30ಲಕ್ಷ ಅನುದಾನ ಒದಗಿಸುವದಾಗಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರ ನೇತೃತ್ವದಲ್ಲಿ ಒಕ್ಕಲಿಗರ ಸಂಘ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವದು ಶ್ಲಾಘನೀಯವಾ ಗಿದ್ದು, ವಿದ್ಯಾಸಂಸ್ಥೆಗೆ ಈಗಾಗಲೇ 5 ಲಕ್ಷ ಅನುದಾನ ಒದಗಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ವರ್ಷಕ್ಕೆ ತಲಾ 5ಲಕ್ಷದಂತೆ ಒಟ್ಟು 30 ಲಕ್ಷ ಅನುದಾನವನ್ನು ತನ್ನ ಅವಧಿಯಲ್ಲಿ ನೀಡಲಾಗುವದು ಎಂದು ಘೋಷಿಸಿದರು.

ವಿದ್ಯಾದಾನ ಪವಿತ್ರ ಕಾರ್ಯ ವಾಗಿದ್ದು, ನಿಸ್ವಾರ್ಥ ಸೇವೆಗೆ ಸಮಾಜದ ಬೆಂಬಲವಿರುತ್ತದೆ. ಒಕ್ಕಲಿಗರ ಸಂಘದ ಸಮುದಾಯ ಭವನಕ್ಕೆ ರೂ. 25ಲಕ್ಷ ಹಾಗೂ ಕುವೆಂಪು ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಈಗಾಗಲೇ 10 ಲಕ್ಷ ಸೇರಿದಂತೆ ಒಟ್ಟು 35 ಲಕ್ಷ ಒದಗಿಸಿದ್ದು, ಶಾಲಾ ಮೈದಾನ ದುರಸ್ತಿ, ತಡೆಗೋಡೆ, ವಾಚನಾಲಯ, ಶಾಲಾ ಕೊಠಡಿಯ ಬೇಡಿಕೆ ಬಂದಿದ್ದು, ಇವುಗಳಲ್ಲಿ ಒಂದು ಬೇಡಿಕೆಯನ್ನು ಈಡೇರಿಸಲಾಗುವದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಶಾಲೆಯ ಬಾತ್ಮೀದಾರ ಲಿಂಗರಾಜು, ಒಕ್ಕಲಿಗರ ಸಂಘದ ಕಾರ್ಯದರ್ಶಿ ಗಣಪತಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಭಾ ಭವನವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.