ಕುಶಾಲನಗರ, ಸೆ. 20: ಪರಿಶಿಷ್ಟ ಪಂಗಡಗಳ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಮೇಶ್ವರ ಓರನ್ ನೇತೃತ್ವದ ತಂಡ ಸಮೀಪದ ಬಸವನಹಳ್ಳಿಯಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿತು.

ತಂಡದ ಸದಸ್ಯರು ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಶಿಕ್ಷಕರ ಬೋಧನಾ ಸಾಮಥ್ರ್ಯ, ಕಲಿಕೆಯಲ್ಲಿ ಆಗುತ್ತಿರುವ ಪ್ರಗತಿ, ಕಟ್ಟಡದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ತಂಡದ ಸದಸ್ಯರಿಗೆ ಮಾಹಿತಿ ನೀಡಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಾ. ರಾಮೇಶ್ವರ ಓರನ್, ಆಶ್ರಮ ಶಾಲೆಯ ಸ್ಥಿತಿಗತಿ ಬಗ್ಗೆ ತೃಪ್ತಿ ಅಥವಾ ಅತೃಪ್ತಿ ವ್ಯಕ್ತಪಡಿಸುವ ಸ್ಥಿತಿಯಲ್ಲಿ ನಾನು ಇಲ್ಲ. ಈಗ ಬದಲಾವಣೆಗಳು ಪ್ರಾರಂಭವಾಗುತ್ತಿದೆ. ಭವಿಷ್ಯದಲ್ಲಿ ಉತ್ತಮ ಬೆಳವಣಿಗೆಯನ್ನು ನಿರೀಕ್ಷೆ ಮಾಡಬಹುದು. ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆ ರೂಪಿಸಿದೆ ಎಂದರು.

ಆಯೋಗದ ಸದಸ್ಯರಾದ ಟಿ.ಡಿ. ಕುಕೇಜಾ, ಆರ್.ಕೆ. ದುಬೆ, ಪರಿಶಿಷ್ಟ ಪಂಗಡಗಳ ಇಲಾಖೆ ಜಂಟಿ ನಿರ್ದೇಶಕ ವಿರೂಪಾಕ್ಷ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಕೆ.ವಿ. ಸುರೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ, ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್, ತಾ.ಪಂ. ಸದಸ್ಯೆ ಪುಷ್ಪಾ ಜನಾರ್ದನ್, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ಮತ್ತಿತರರು ಇದ್ದರು.

ಮನವಿ ಸಲ್ಲಿಕೆ: ಆಶ್ರಮ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತಮಗೆ ಸೇವಾ ಭದ್ರತೆ ಮತ್ತು ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಓರನ್ ಅವರಿಗೆ ಮನವಿ ಸಲ್ಲಿಸಿದರು. ಅರಣ್ಯದಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ಹಕ್ಕು ಪತ್ರ ನೀಡುವ ವ್ಯವಸ್ಥೆ ಮಾಡಬೇಕು ಎಂದು, ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜೆ.ಪಿ. ರಾಜು ಕೋರಿಕೊಂಡರು. ಎಂಎಲ್‍ಎ ಮತ್ತು ಎಂಪಿ ಕ್ಷೇತ್ರಗಳಲ್ಲಿ ಇರುವ ಪರಿಶಿಷ್ಟ ಪಂಗಡದ ಅನುದಾನ

ಸಮರ್ಪಕವಾಗಿ ಬಳಕೆ ಆಗದಿರುವ ಬಗ್ಗೆ ಗಮನ ಹರಿಸುವಂತೆ ಸೋಲಿಗ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಣ್ಣಪ್ಪ ಮನವಿ ಮಾಡಿದರು. ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಿದ ಸಮಿತಿಯ ಜೆ.ಕೆ. ಪ್ರಕಾಶ್, ಅರಣ್ಯ ಹಕ್ಕುಗಳ ಬಗ್ಗೆ ಗಿರಿಜನರಿಗೆ ಸರಿಯಾದ ಮಾಹಿತಿ ಇಲ್ಲ. ಕಾಡಿನಲ್ಲಿ ಬದುಕುತ್ತಿರುವ ಜೇನುಕುರುಬರಿಗೆ ಸ್ವಂತ ಭೂಮಿ ನೀಡಿ, ಅವರ ಸ್ವಾವಲಂಬಿ ಬದುಕಿಗೆ ನೆರವಾಗಬೇಕು ಎಂದು ಕೇಳಿಕೊಂಡರು.

ಮನವಿ ಆಲಿಸಿದ ಓರನ್, ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ನಿಡುವ ಭರವಸೆ ನೀಡಿದರು. ಇದೇ ಸಂದರ್ಭ ಬಸವನಹಳ್ಳಿ ಸಂಚಾರಿ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.