ವೀರಾಜಪೇಟೆ, ಜ. 4: ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಮಂಜೂರು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ರಾಜ್ಯ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.ಪ್ರಸ್ತುತ ತಾಲೂಕುಮಟ್ಟದ ಎಲ್ಲಾ ಸರಕಾರಿ ಕಚೇರಿಗಳು ಪೊನ್ನಂಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪೊನ್ನಂಪೇಟೆ ಪಟ್ಟಣದಲ್ಲಿ ಹನ್ನೆರಡು ಸಾವಿರಕ್ಕಿಂತ ಮೇಲ್ಪಟ್ಟು ಜನಸಂಖ್ಯೆ ಇದೆ. ಇಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದು, ಪೊನ್ನಂಪೇಟೆ ಕೇಂದ್ರದ ಸುತ್ತ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಲ್ಲ. ಹೀಗಾಗಿ ಆ ಭಾಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸುಮಾರು 95 ಕಿ.ಮೀ. ದೂರ ಬರಬೇಕಾಗುತ್ತಿದೆ. ಈ ಕಾರಣಕ್ಕಾಗಿ ಪೊನ್ನಂಪೇಟೆಯಲ್ಲಿ ಒಂದು ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜನ್ನು ಮಂಜೂರು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯ ರೆಡ್ಡಿ ಅವರಿಗೆ ಪತ್ರ ಕಳುಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು ಈ ಕುರಿತು 2017-18ನೇ ಸಾಲಿನ ಮಂಜೂರಾತಿ ಪಟ್ಟಿಯಲ್ಲಿ ಸೇರಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಪತ್ರ ಕಳುಹಿಸಿರುವರು. ಹೀಗಾಗಿ ಪೊನ್ನಂಪೇಟೆಯಲ್ಲಿ ಒಂದು ಪ್ರಥಮ ದರ್ಜೆ ಪದವಿ ಕಾಲೇಜಿಗೆ ಮಂಜೂರಾತಿ ಸಿಗುವ ಸಾಧ್ಯತೆಗಳಿವೆ.