ಕುಶಾಲನಗರ, ಡಿ. 25: ಜಿಲ್ಲಾಮಟ್ಟದ ಪತ್ರಕರ್ತರ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಕುಶಾಲನಗರದಲ್ಲಿ ನಡೆಯಿತು. ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್ ಆಶ್ರಯದಲ್ಲಿ ಕುಶಾಲನಗರ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ ಜಿಲ್ಲೆಯ 5 ತಂಡಗಳು ಪಾಲ್ಗೊಂಡಿದ್ದವು. ಪಾರ್ಥ ಚಿಣ್ಣಪ್ಪ ನಾಯಕತ್ವದ ವೀರಾಜಪೇಟೆಯ ಸೌತ್ ಟೈಗರ್ಸ್ ತಂಡ ವಿಜೇತರಾದರೆ, ಸುವರ್ಣ ಮಂಜು ನಾಯಕತ್ವದ ಮಡಿಕೇರಿಯ ಟೀಮ್ 90 ತಂಡ ದ್ವಿತೀಯ ಸ್ಥಾನ ಗಳಿಸಿತು. ಕುಶಾಲನಗರದ ಟಿ.ಆರ್. ಪ್ರಭುದೇವ್ ನಾಯಕತ್ವದ ಎಸ್‍ಎಂಎಸ್ ಮೀಡಿಯ ಫ್ರೆಂಡ್ಸ್ ತಂಡ
(ಮೊದಲ ಪುಟದಿಂದ) ತೃತೀಯ ಸ್ಥಾನ ಗಳಿಸಿದೆ. ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು, ರಾಷ್ಟ್ರೀಯ ಪತ್ರಕರ್ತರ ಸಂಘದ ಪ್ರತಿನಿಧಿ ಬಿ.ಎಸ್. ಲೋಕೇಶ್ ಸಾಗರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ಆಯೋಜಕರಾದ ಕೆ.ಟಿ. ಶ್ರೀನಿವಾಸ್, ಮಹಮ್ಮದ್ ಮುಸ್ತಾಫ, ಕೆ.ಜೆ. ಶಿವರಾಜ್, ಹರೀಶ್‍ಗೌಡ ಮತ್ತಿತರರು ಇದ್ದರು.