ಮಡಿಕೇರಿ, ಡಿ. 20: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ 1015ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ರಾಜ್ಯದ ಪತ್ರಕರ್ತರಿಂದ ವರದಿ, ಲೇಖನ, ಸುದ್ದಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ.ಅತ್ಯುತ್ತಮ ಗ್ರಾಮಾಂತರ ವರದಿಗೆ ಜಿ. ನಾರಾಯಣ ಸ್ವಾಮಿ ಪ್ರಶಸ್ತಿ, ಮಾನವೀಯ ವರದಿಗೆ ಪಟೇಲ್ ಭೈರಹನುಮಯ್ಯ ಪ್ರಶಸ್ತಿ, ಅಪರಾಧ ವರದಿಗೆ ಗಿರಿಧರ್ ಪ್ರಶಸ್ತಿ, ಸ್ಕೂಪ್ ವರದಿಗೆ ಬಿ.ಎಸ್. ವೆಂಕಟರಾಂ ಪ್ರಶಸ್ತಿ, ಕ್ರೀಡಾ ವರದಿಗೆ ಕೆ.ಎ. ನೆಟ್ಟಕಲ್ಲಪ್ಪ ಪ್ರಶಸ್ತಿ, ವಿಮರ್ಶಾತ್ಮಕ ಲೇಖನಕ್ಕೆ ಖಾದ್ರಿ ಶಾಮಣ್ಣ ಪ್ರಶಸ್ತಿ, ವಾರಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ಲೇಖನಕ್ಕೆ ಮಂಗಳ ಎಂ.ಸಿ. ವರ್ಗಿಸ್ ಪ್ರಶಸ್ತಿ, ಸುದ್ದಿ ಛಾಯಾಚಿತ್ರಕ್ಕೆ ಮಂಡಿಬೆಲೆ ರಾಜಣ್ಣ ಪ್ರಶಸ್ತಿ, ಅರಣ್ಯ ಕುರಿತ ಲೇಖನಕ್ಕೆ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ, ವನ್ಯಪ್ರಾಣಿಗಳ ಕುರಿತ ಲೇಖನಕ್ಕೆ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ, ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ ಗತಿ ಕುರಿತ ವರದಿಗೆ ಬಿ.ಜಿ. ತಿಮ್ಮಪ್ಪಯ್ಯ ಪ್ರಶಸ್ತಿ, ಗ್ರಾಮೀಣ ಜನ ಜೀವನ ಕುರಿತ ವರದಿಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಭಿವೃದ್ಧಿ ಕುರಿತ ವರದಿಗೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ, ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗುವ ಕೃಷಿ ವರದಿಗೆ ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ, ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ ಪ್ರಶಸ್ತಿ ನೀಡಲಾಗುವದು.
2015ನೇ ಜನವರಿ 1 ರಿಂದ ಡಿಸೆಂಬರ್ 31 ರೊಳಗಡೆ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ, ವರದಿ, ಸುದ್ದಿ ಛಾಯಾಚಿತ್ರಗಳನ್ನು ಕಳುಹಿಸಿ ಕೊಡಬಹುದಾಗಿದೆ. ಯಾವ ಪ್ರಶಸ್ತಿಗೆ ಎಂಬದನ್ನು ಸ್ಪಷ್ಟವಾಗಿ ಬರೆದಿರಬೇಕು, ಅನುವಾದ ಮಾಡಿದ ವರದಿ, ಲೇಖನಗಳಿಗೆ ಅವಕಾಶವಿಲ್ಲ, ಒಬ್ಬರು ಒಂದು ಪ್ರಶಸ್ತಿಗೆ ಮಾತ್ರ ಸಲ್ಲಿಸ ಬಹುದಾಗಿದೆ, ಮೂರು ಪ್ರತಿಗಳಲ್ಲಿ (ಒಂದು ಮೂಲ ಪ್ರತಿ) ವಿದ್ಯುನ್ಮಾನ ಮಾಧ್ಯಮದವರು ವೀಡಿಯೋ ಕ್ಲಿಪ್ಪಿಂಗ್ ಮತ್ತು ಸ್ಕ್ರಿಪ್ಟ್‍ಗಳನ್ನು ಕಳುಹಿಸಬೇಕು. ವರದಿಯೊಂದಿಗೆ ಸ್ವ-ಪರಿಚಯ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು 31.12.2016ರ ಒಳಗಡೆ ಅಧ್ಯಕ್ಷರು-ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕಂದಾಯ ಭವನ, 3ನೇ ಮಹಡಿ, ಕೆ.ಜಿ. ರಸ್ತೆ, ಬೆಂಗಳೂರು-560009 ಈ ವಿಳಾಸಕ್ಕೆ ಕಳುಹಿಸಿಕೊಡ ಬಹುದಾಗಿದೆ ಎಂದು ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.