ಕುಶಾಲನಗರ, ಸೆ. 28: ಪತ್ನಿಯ ಕುಮ್ಮಕ್ಕಿನಿಂದ ಪತಿಯ ಮತ್ತು ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಹಿನೆÀ್ನಲೆಯಲ್ಲಿ ಪತ್ನಿ ಸೇರಿದಂತೆ ಕುಶಾಲನಗರದ ಇಬ್ಬರು ಆರೋಪಿಗಳನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರದ ಬೈಚನಹಳ್ಳಿಯ ಪಂಪ್‍ಹೌಸ್ ಬಳಿಯ ಮಹಿಳೆ ಬಿ.ವಿ.ಅಶ್ವಿನಿ ಮತ್ತು ನಿಜಾಮುದ್ದೀನ್ ಬಡಾವಣೆಯ ಅಬ್ದುಲ್ ಆಸಿಂ ಎಂಬವರು ಬಂಧಿತ ಆರೋಪಿಗಳು.

ತಾ. 7 ರಂದು ಗುತ್ತಿಗೆದಾರ ಬೈಚನಹಳ್ಳಿ ನಿವಾಸಿ ದಿನೇಶ್ ತನ್ನ ಪುತ್ರನೊಂದಿಗೆ ಕುಶಾಲನಗರದಿಂದ ಮೈಸೂರಿಗೆ ತನ್ನ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಹುಣಸೂರು ಕಲ್ಲುಬೆಟ್ಟ ಬಳಿ ವಾಹನವನ್ನು ಅಡ್ಡಗಟ್ಟಿ ಅಬ್ದುಲ್ ಆಸಿಂ ಮತ್ತು ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಹಿನ್ನೆಲೆಯಲ್ಲಿ ವಿ.ಟಿ. ದಿನೇಶ್ ಮತ್ತು ಪುತ್ರ ವಿ.ಡಿ. ಕೀರ್ತನ್ ತೀವ್ರ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು.

ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಸಂದರ್ಭ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು ಗುತ್ತಿಗೆದಾರ ದಿನೇಶ್ ಪತ್ನಿ ಬಿ.ವಿ. ಅಶ್ವಿನಿ ಅಬ್ದುಲ್ ಆಸಿಂನೊಂದಿಗೆ ಸೇರಿ ಹತ್ಯೆಗೈಯಲು ಸಂಚು ರೂಪಿಸಿರುವದಾಗಿ ತಿಳಿದು ಬಂದಿದೆ ಎಂದು ಹಲ್ಲೆಗೊಳಗಾದ ವಿ.ಟಿ. ದಿನೇಶ್ ಮಾಹಿತಿ ನೀಡಿದ್ದಾರೆ.

ದಿನೇಶ್ ಪತ್ನಿ ಅಶ್ವಿನಿ ಕಳೆದ ಹಲವು ದಿನಗಳಿಂದ ಅಬ್ದುಲ್ ಆಸಿಂನೊಂದಿಗೆ ಒಡನಾಟ ಬೆಳೆಸಿದ್ದು ಈ ಘಟನೆ ನಂತರ ನಾಪತ್ತೆಯಾಗಿದ್ದರು ಎಂದು ಹಲ್ಲೆಗೊಳಗಾದ ಪತಿ ವಿ.ಟಿ.ದಿನೇಶ್ ತಿಳಿಸಿದ್ದಾರೆ. ಆರೋಪಿಗಳ ಶೋಧ ಕಾರ್ಯಾಚರಣೆ ನಡೆಸಿದ ಹುಣಸೂರು ಗ್ರಾಮಾಂತರ ಠಾಣಾಧಿಕಾರಿ ಪುಟ್ಟಸ್ವಾಮಿ, ಹುಣಸೂರು ಪಟ್ಟಣ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಬುಧವಾರ ಬೆಳಗಿನ ಜಾವ ಪತ್ತೆಹಚ್ಚಿ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವದಾಗಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದ್ದಾರೆ.