ಸೋಮವಾರಪೇಟೆ, ಜೂ. 18: ಪತಂಜಲಿ ಯೋಗ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ತಾ. 21 ರಂದು ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಅಧ್ಯಕ್ಷ ಚಂದ್ರಪ್ಪ ಮಾಸ್ತರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಬೇಳೂರು ರಸ್ತೆಯಲ್ಲಿನ ವೀರಶೈವ ಸಮುದಾಯ ಭವನದಲ್ಲಿ ಅಂದು ಬೆಳಿಗ್ಗೆ 6.30ರಿಂದ 8 ಗಂಟೆಯವರೆಗೆ ಸಾಮೂಹಿಕವಾಗಿ ಯೋಗ ಮಾಡುವ ಮೂಲಕ ದಿನಾಚರಣೆಯನ್ನು ಆಚರಿಸಲಾಗುವದು ಎಂದರು. ತಹಶೀಲ್ದಾರ್ ಶಿವಪ್ಪ, ಲೋಕಾಯುಕ್ತ ಮಾಜಿ ಎಸ್.ಪಿ. ಶಿವಮೂರ್ತಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಪೀಠದ ಸ್ಥಾಪಕ ಯೋಗಋಷಿ ಬಾಬಾ ರಾಮ್ದೇವ್ ಅವರು, ರಾಷ್ಟ್ರದ ಕೇಂದ್ರವಾಗಿ ಹರಿಯಾಣದಲ್ಲಿ ಸುಮಾರು 2 ಲಕ್ಷ ಮಂದಿಯನ್ನು ಒಂದೆಡೆಯಲ್ಲಿ ಸೇರಿಸಿ, ಸಾಮೂಹಿಕ ಯೋಗ ಮಾಡುವ ಆಚರಣಾ ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಥಳೀಯವಾಗಿ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುವದು ಎಂದರು.
ಯೋಗ ದಿನಾಚರಣೆಯ ಅಂಗವಾಗಿ ತಾ. 18 ರಿಂದ 20ರ ವರೆಗೆ ಉಚಿತ ಯೋಗ ಶಿಬಿರವನ್ನು ವೀರಶೈವ ಸಮುದಾಯ ಭವನದಲ್ಲಿ ಪ್ರತಿದಿನ ಬೆಳಿಗ್ಗೆ 6.30ರಿಂದ 8 ಗಂಟೆಯವರೆಗೆ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಸರ್ವರೂ ಪಡೆದುಕೊಳ್ಳಬೇಕೆಂದು ಮಾಸ್ತರ್ ತಿಳಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಬಿ. ಲೀಲಾರಾಂ, ಡಾ. ಬಿ.ಪಿ. ಶೆಟ್ಟಿ ಹಾಗೂ ಡಾ. ಎಂ.ಪಿ. ಪುಟ್ಟಣ್ಣ ಉಪಸ್ಥಿತರಿದ್ದರು.
ನಿರಂತರ ಯೋಗ ತರಬೇತಿ ಕೇಂದ್ರದಿಂದ: ಪಟ್ಟಣದ ನಿರಂತರ ಯೋಗ ತರಬೇತಿ ಕೇಂದ್ರದ ನೇತೃತ್ವದಲ್ಲಿ ತಾ. 21ರಂದು ಸ್ಥಳೀಯ ಕೊಡವ ಸಮಾಜದಲ್ಲಿ ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಯೋಗಾಸನ ಆಯೋಜಿಸುವ ಮೂಲಕ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುವದು ಎಂದು ಕೇಂದ್ರದ ತರಬೇತುದಾರ ಕಿಬ್ಬೆಟ್ಟ ಗಣೇಶ್ ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ನ ಸೋಮವಾರಪೇಟೆ ಘಟಕದ ವತಿಯಿಂದ
ಆರ್ಟ್ ಆಫ್ ಲಿವಿಂಗ್ನ ಸೋಮವಾರಪೇಟೆ ಘಟಕ, ವಿವೇಕಾನಂದ ಜಯಂತ್ಯೋತ್ಸವ ಸಮಿತಿ, ತಾಲೂಕು ಯುವ ಒಕ್ಕೂಟ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಕುಮ ಜ್ಞಾನವಿಕಾಸ ಕೇಂದ್ರದ ಆಶ್ರಯದಲ್ಲಿ ತಾ. 21 ರಂದು ಇಲ್ಲಿನ ಮಾನಸ ಸಭಾಂಗಣದಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.
ತಾ. 21 ರಂದು ಬೆಳಿಗ್ಗೆ 6.30 ರಿಂದ 7.30 ರವರೆಗೆ ಯೋಗ ದಿನಾಚರಣೆ ನಡೆಯಲಿದ್ದು, ರೊಟೇರಿಯನ್ ಬಿ.ಎಸ್. ಶ್ರೀಧರ್ ಉದ್ಘಾಟಿಸಲಿದ್ದಾರೆ. ಆರ್ಟ್ ಆಫ್ ಲಿವಿಂಗ್ನ ಶಿಕ್ಷಕರಾದ ದೀಪಕ್ ಉಪಾಧ್ಯಾಯ ಅವರು ಯೋಗದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪೂರ್ವಾಹ್ನ 11 ಗಂಟೆಗೆ ದೊಡ್ಡಮಳ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಅಪರಾಹ್ನ 3 ಗಂಟೆಗೆ ಕೊಡ್ಲಿಪೇಟೆಯಲ್ಲಿ ಯೋಗ ದಿನಾಚರಣೆ ನಡೆಯಲಿದೆ ಎಂದು ಆರ್ಟ್ ಆಫ್ ಲಿವಿಂಗ್ನ ಸಂಯೋಜಕಿ ರಾಗಿಣಿ ತಿಳಿಸಿದ್ದಾರೆ.