ಮಡಿಕೇರಿ, ಡಿ. 28: ಆಹಾರ ಖಾತೆ ಸಚಿವರು ಬದಲಾದಂತೆಲ್ಲಾ ಪಡಿತರ ನಿಯಮವೂ ಬದಲಾಗುತ್ತಿದ್ದು, ನ್ಯಾಯ ಬೆಲೆ ಅಂಗಡಿಗಳಿಂದ ಪಡಿತರ ಸಾಮಗ್ರಿಗಳನ್ನು ಖರೀದಿಸುವ ಜನಸಾಮಾನ್ಯರನ್ನು ರಾಜ್ಯ ಸರಕಾರ ಪ್ರಯೋಗ ಶಾಲೆಯನ್ನಾಗಿ ಮಾಡಿ ಕೊಂಡಿದೆ ಎಂದು ಆರೋಪಿಸಿರುವ ಬಿಜೆಪಿಯ ಜಿಲ್ಲಾ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಪಡಿತರ ವ್ಯವಸ್ಥೆಯನ್ನು ಸರಿಪಡಿಸದ್ದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಹಿಂದೆ ಆಹಾರ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರ ಸ್ಥಾನವನ್ನು ಅಲಂಕರಿಸಿರುವ ಯು.ಟಿ. ಖಾದರ್ ಇದೀಗ ಪಡಿತರ ಸಾಮಗ್ರಿ ಬದಲು ಪಡಿತರ ಚೀಟಿದಾರರಿಗೆ ಹಣವನ್ನು ನೀಡಲು ಯೋಜನೆ ರೂಪಿಸಿದ್ದು, ಇದು ದುರುಪಯೋಗಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ 8 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತಿತ್ತು. ಆದರೆ ಇದೀಗ ಈ ಪ್ರಮಾಣ 3 ಕೆ.ಜಿ.ಗೆ ಇಳಿದಿದ್ದು, ವಿವಿಧ ಕಾರಣಗಳ ಮೂಲಕ ಬಡವರ ಹೊಟ್ಟೆ ಹಸಿವಿನೊಂದಿಗೆ ಸರಕಾರ ಆಟವಾಡುತ್ತಿದೆ. ಆಹಾರ ಇಲಾಖೆ ಪಡಿತರ ಚೀಟಿದಾರರನ್ನು ಪ್ರಯೋಗಕ್ಕೆ ಒಳಪಡಿಸುತ್ತಿದ್ದು, ಟೋಕನ್ ವ್ಯವಸ್ಥೆಯಿಂದ ಜನ ಬೇಸತ್ತಿರುವಾಗಲೇ ಹಣ ನೀಡುವದಾಗಿ ಆಮಿಷ ವೊಡ್ಡಲಾಗುತ್ತಿದೆ. ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಮೂಲಕ ಬಡವರ್ಗದ ಹಾದಿ ತಪ್ಪಿಸಿದ ಸರಕಾರ ಹಣ ನೀಡುವದಾಗಿ ಹೇಳಿ ದುರುಪ ಯೋಗಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ತಲಾ 30 ಕೆ.ಜಿ. ಅಕ್ಕಿಯನ್ನು ನೀಡಲಾಗುತಿತ್ತು. ಆದರೆ ಇಂದಿನ ಸರಕಾರ ಪಡಿತರ ವ್ಯವಸ್ಥೆಯಲ್ಲೂ ಕೊರತೆ ಉಂಟು ಮಾಡುತ್ತಿದೆ. ಸೀಮೆಎಣ್ಣೆ ಸಮಸ್ಯೆಯೂ ಮಿತಿ ಮೀರಿದ್ದು, ಬೆಟ್ಟಗುಡ್ಡ ಪ್ರದೇಶವಾಗಿರುವ ಕೊಡಗು ಜಿಲ್ಲೆಗೆ ಅಗತ್ಯವಿರುವಷ್ಟು ಸೀಮೆಎಣ್ಣೆ ದೊರೆಯುತ್ತಿಲ್ಲ. ಈ ಹಿಂದೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂದಿನ ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಗೆ ವಿಶೇಷ ಆದ್ಯತೆ ಮೇರೆಗೆ ಹೆಚ್ಚಿನ ಸೀಮೆಎಣ್ಣೆ ಒದಗಿಸುವದಾಗಿ ಭರವಸೆ ನೀಡಿದ್ದರು. ಆದರೆ ಇಂದು ಅಡುಗೆ ಅನಿಲದ ಸಿಲಿಂಡರ್ ಹೊಂದಿರುವವರಿಗೆ ಸೀಮೆಎಣ್ಣೆ ಇಲ್ಲ ಎಂದು ಘೋಷಿಸಲಾಗಿದೆ. ಇದರಿಂದಾಗಿ ಕೊಡಗಿನ ಗ್ರಾಮೀಣ ಪ್ರದೇಶ ಕಾರ್ಗತ್ತಲಿನಲ್ಲಿ ಮುಳುಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚುವರಿ ಸೀಮೆಎಣ್ಣೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪಡಿತರ ಚೀಟಿದಾರರಿಗೆ ಪಡಿತರ ಸಾಮಗ್ರಿ ಬದಲಿಗೆ ಹಣ ನೀಡಿದರೆ ಸಹಕಾರಿ ಸಂಘಗಳ ಮೂಲಕ ಪಡಿತರ ಅಂಗಡಿಗಳನ್ನು ನಡೆಸುತ್ತಿರುವ ಸಾವಿರಾರು ಸಿಬ್ಬಂದಿಗಳು ಬೀದಿಪಾಲಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನ್ಯಾಯ ಬೆಲೆ ಅಂಗಡಿಗಳ ಮೂಲಕ ಸೃಷ್ಟಿಯಾಗಿದ್ದ ಉದ್ಯೋಗಗಳನ್ನು ಕಸಿದುಕೊಳ್ಳುವ ಸಾಧ್ಯತೆಗಳಿದೆ. ವೈಯಕ್ತಿಕ ಲೈಸನ್ಸ್ ಪಡೆದು ಪಡಿತರ ವಿತರಿಸು ತ್ತಿರುವವರಿಗೂ ತೊಂದರೆಯಾಗಲಿದೆ ಎಂದು ಟೀಕಿಸಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿನ ಅವೈಜ್ಞಾನಿಕ ಕ್ರಮಗಳನ್ನು ಕೈಬಿಟ್ಟು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿ ಅಗತ್ಯವಿರುವಷ್ಟು ಆಹಾರ ಸಾಮಗ್ರಿಗಳನ್ನು ಪೂರೈಸದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ಎಚ್ಚರಿಕೆ ನೀಡಿದ್ದಾರೆ.