ಮಡಿಕೇರಿ, ಜೂ. 20: ಕೊಡಗು ಜಿಲ್ಲೆಯಲ್ಲಿ 91,639 ಬಿ.ಪಿ.ಎಲ್. ಪಡಿತರ ಚೀಟಿಗಳಿದ್ದು, 7,587 ಅಂತ್ಯೋದಯ ಪಡಿತರ ಚೀಟಿಗಳಿದ್ದು, ಜಿಲ್ಲೆಯಲ್ಲಿ ಇರಬೇಕಿದ್ದ ಪಡಿತರ ಚೀಟಿಗಳ ಸಂಖ್ಯೆಗಿಂತ ಸುಮಾರು ಅರ್ಧದಷ್ಟು ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಿಗೆ ಇರುವದು ಗಮನಕ್ಕೆ ಬಂದಿದೆ.

ಈ ಪೈಕಿ ಬಹಳಷ್ಟು ಕಾರ್ಡುದಾರರು ಶ್ರೀಮಂತರಾಗಿದ್ದು, ಅನರ್ಹರು ಇರಬಹುದೆಂದು ಇಂತಹ ಶ್ರೀಮಂತರು ಮತ್ತು ಅನರ್ಹರು ಬಿ.ಪಿ.ಎಲ್. ಪಡಿತರ ಚೀಟಿ ಪಡೆಯುವ ಅರ್ಹತೆ ಇಲ್ಲದಿದ್ದರು ಇಲಾಖೆಗೆ ತಪ್ಪು ಮಾಹಿತಿ ನೀಡಿ ಬಿ.ಪಿ.ಎಲ್. ಅಥವಾ ಅಂತ್ಯೋದಯ ಪಡಿತರ ಚೀಟಿಗಳನ್ನು ಪಡೆದಿರಬಹುದು. ಇಂತಹ ಪಡಿತರ ಚೀಟಿಗಳನ್ನು ಈ ಕೂಡಲೇ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಇಂತವರು ಈ ಹಿಂದೆ ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದು, ಈಗ ಕೊನೆಯದಾಗಿ ತಾ. 30 ರವರೆಗೆ ತಮ್ಮಲ್ಲಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಇಲಾಖೆಗೆ ಹಿಂದಿರುಗಿಸಲು ಕೊನೆಯ ಅವಕಾಶ ನೀಡಲಾಗಿದೆ. ಅದರ ನಂತರ ಅನರ್ಹ ಪಡಿತರ ಚೀಟಿಗಳನ್ನು ಹೊಂದಿರುವದು ಪತ್ತೆಯಾದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.