ಸೋಮವಾರಪೇಟೆ, ಸೆ. 21: ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಾಂತ್ರಿಕ ತೊಂದರೆಯಿಂದ ಪಡಿತರ ಕೂಪನ್ ದೊರೆಯದ ಹಿನ್ನೆಲೆ ಪಡಿತರ ಚೀಟಿದಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕೂಲಿ ಕಾರ್ಮಿಕರಿಗೆ ಸೋಮವಾರ ರಜೆ ದಿನವಾದ ಕಾರಣ ಪಡಿತರವನ್ನು ಪಡೆಯಲು ಕೂಪನ್‍ಗಾಗಿ ಪಂಚಾಯಿತಿ ಕಚೇರಿಗೆ ಬೆಳಿಗ್ಗೆ 10 ಗಂಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸರ್ವರ್ ಸಮಸ್ಯೆಯಿಂದ ಕೂಪನ್ ವಿತರಿಸಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗಳು ಹೇಳಿದ್ದರಿಂದ ಆಕ್ರೋಶಿತರಾದ ಕಾರ್ಮಿಕರು ಪಂಚಾಯಿತಿ ಹಾಗೂ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಾರಕ್ಕೆ ಒಂದು ದಿನ ರಜೆ ಇದ್ದು, ಮಂಗಳವಾರ ಪಡಿತರ ಪಡೆಯಲು ಕೂಲಿ ಕೆಲಸಕ್ಕೆ ರಜೆ ಮಾಡಿ ಬರಬೇಕು. ನಮಗೆ ಕೂಲಿ ಹಣ ಯಾರು ಕೊಡುತ್ತಾರೆ ಎಂದು ಕಾರ್ಮಿಕರಾದ ರಾಜು, ದಿನೇಶ್, ಸಾವಿತ್ರಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಮಾಹಿತಿ ನೀಡಲಾಗಿದೆ. ಸರ್ವರ್ ಸರಿಪಡಿಸಿದ ಕೂಡಲೇ ಕೂಪನ್ ವಿತರಿಸ ಲಾಗುವದು ಎಂದು ಪಿಡಿಒ ಲಿಖಿತ ಹೇಳಿದರು. ನಂತರ ಪಡಿತರದಾರರು ಮನೆಗೆ ವಾಪಾಸ್ಸಾದರು.