ಗೋಣಿಕೊಪ್ಪಲು, ನ. 21: ಗೋಣಿಕೊಪ್ಪಲು ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣ. ಗೋಣಿಕೊಪ್ಪಲು ಗ್ರೇಡ್1 ಗ್ರಾಮ ಪಂಚಾಯಿತಿ. ಸಂತೆ ಮಾರುಕಟ್ಟೆ, ಮಳಿಗೆಗಳು ಮುಂತಾದವುಗಳಿಂದ ಪಂಚಾಯಿತಿಗೆ ಸಾಕಷ್ಟು ಆದಾಯ ಬರುತ್ತಿದೆ. ಆದರೆ ಪಟ್ಟಣದ ಅಭಿವೃದ್ಧಿ ಮಾತ್ರ ಮಂದಗತಿಯಲ್ಲಿದೆ. ಚರಂಡಿ ಕೊಳೆತು ನಾರುತ್ತಿವೆ. ಎರಡು ವರ್ಷದಿಂದ ಬಸ್ ನಿಲ್ದಾಣ ಇಲ್ಲದೆ ಜನತೆ ಬವಣೆ ಪಡುತ್ತಿದ್ದಾರೆ. ಶೌಚಾಲಯವಿಲ್ಲದೆ ಪರದಾಡುತ್ತಿದ್ದಾರೆ. ಇದರ ಜೊತೆಗೆ ಕಸದ ರಾಶಿ ಬೇರೆ ಜನತೆಯ ನೆಮ್ಮದಿ ಕೆಡಿಸಿದೆ. ಎಲ್ಲಿ ನೋಡಿದರೂ ಕಸದ ರಾಶಿ. ಕೊಳೆತು ದುರ್ವಾಸನೆ ಬೀರುತ್ತಿದೆ. ಜುಂಯ್‍ಗುಡುವ ಸೊಳ್ಳೆ ಮತ್ತು ನೊಣಗಳ ಸಾಮ್ರಾಜ್ಯ. ಗ್ರಾಮ ಪಂಚಾಯಿತಿಗೆ ಶಾಪ ಹಾಕುವ ಜನತೆ ಇದು ಗೋಣಿಕೊಪ್ಪಲು ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಕಂಡು ಬರುತ್ತಿರುವ ದೃಶ್ಯ.

ಪೌರ ಕಾರ್ಮಿಕರು ಬಸ್ ನಿಲ್ದಾಣದ ಕಸ ಗುಡಿಸಿ ಪ್ಲಾಸ್ಟಿಕ್ ಚೀಲದಲ್ಲಿ ತಂಬಿ ಮುಖ್ಯ ರಸ್ತೆ ಬದಿಯ ವಿದ್ಯುತ್ ಕಂಬದ ಬುಡದಲ್ಲಿ ರಾಶಿ ಹಾಕಿದ್ದಾರೆ. ಬಸ್ ನಿಲ್ದಾಣ ದಲ್ಲಿಯೂ ಕಸದ ರಾಶಿ ತುಂಬಿದೆ. ಚೀಲದಲ್ಲಿ ಕಸ ಕೊಳೆಯುತ್ತಿರುವ ದರಿಂದ ನೊಣಗಳು ಮುತ್ತುತ್ತಿವೆ. ಸೊಳ್ಳೆಗಳು ವಿಪರೀತ ವಾಗಿವೆ. ಜನತೆ ವಿಧಿಯಿಲ್ಲದೆ ಕಸದ ರಾಶಿಯ ಮೇಲೆಯೇ ವಾಹನ ನಿಲ್ಲಿಸುತ್ತಿದ್ದಾರೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಿಲ್ಲುತ್ತಿದ್ದಾರೆ.

ಇಂತಹ ಸ್ಥಿತಿ ಗೋಣಿಕೊಪ್ಪಲು ಪಟ್ಟಣಕ್ಕೆ ಯಾವತ್ತೂ ಬಂದಿರಲಿಲ್ಲ. ಕಳೆದ ಒಂದು ವರ್ಷದಿಂದ ಕಸ ವಿಲೇವಾರಿ ಸಮಸ್ಯೆ ತೀವ್ರಗೊಂಡಿದೆ. ಪಟ್ಟಣದ ಎಲ್ಲ ನಿರ್ವಹಣೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದೆ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇಂತಹ ಭೀಕರ ಸಮಸ್ಯೆಗಳ ನಡುವೆಯೂ ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ ಎಂಬದು ಸಾರ್ವಜನಿಕರ ಆಕ್ರೋಶ.

ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿಯೇ ಕಸದ ರಾಶಿ ತುಂಬಿರುವಾಗ ಇನ್ನು ಉಳಿದ ರಸ್ತೆಗಳ ಸ್ಥಿತಿಯನ್ನು ಕೇಳುವದೇ ಬೇಡ. ಯಾವ ಕಡೆ ನಡೆದಾಡಿದರೂ ಕೊಳೆತ ತ್ಯಾಜ್ಯದ ದುರ್ವಾಸನೆಯೇ ಬೀರುತ್ತಿದೆ. ಬೀದಿ ನಾಯಿಗಳು ಕಸವನ್ನು ರಸ್ತೆಗೆ ಎಳೆದು ಹಾಕಿ ರಸ್ತೆಯಲ್ಲಿಯೂ ನಡೆದಾಡಲು ಆಗದ ಸ್ಥಿತಿ ಉದ್ಭವಿಸಿದೆ. ಮುಂಜಾನೆ ಮತ್ತು ಸಂಜೆ ವೇಳೆ ವಾಯು ವಿಹಾರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಸ ವಿಲೇವಾರಿಗೆ ಜಾಗದ ಸಮಸ್ಯೆ ಎದುರಾಗಿದೆ ಎಂದು ಗ್ರಾಮ ಪಂಚಾಯಿತಿ ಕಳೆದ ಒಂದು ವರ್ಷದಿಂದಲೂ ಸಬೂಬು ಹೇಳಿಕೊಂಡೇ ಬರುತ್ತಿದೆ. ಹಿಂದೆಯೂ ಜಾಗದ ಸಮಸ್ಯೆ ಇತ್ತು. ಆದರೆ ಹಿಂದಿನ ಅಧ್ಯಕ್ಷರು ಹೇಗೋ ಅವರಿವರನ್ನು ಕೇಳಿಕೊಂಡು ಖಾಸಗಿ ಜಾಗದಲ್ಲಿ ಕಸ ಹಾಕುತ್ತಿದ್ದರು. ಆದರೆ ಈಗಿನ ಅಧ್ಯಕ್ಷರು ಇಂತಹ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಸ ಕೊಳೆತು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದರೂ ಯಾವದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿದ್ದಾರೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಗ್ರಾ.ಪಂ. ಎಚ್ಚೆತ್ತು ಕಸ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.