ಸೋಮವಾರಪೇಟೆ, ಅ.2 : ಜಿಲ್ಲೆಯಲ್ಲಿ ವೀರಶೈವ ಸಮಾಜ ಬಾಂಧವರು ಪಕ್ಷಾತೀತರಾಗಿ ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ವಕೀಲರಾದ ಚಂದ್ರಮೌಳಿ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆಯಲ್ಲಿ ಅಕ್ಟೋಬರ್ 16ರಂದು ನಡೆಯುವ ಜಿಲ್ಲಾ ಮಟ್ಟದ ವೀರಶೈವ ಕ್ರೀಡಾಕೂಟ ಹಾಗೂ 18 ರಂದು ನಡೆಯಲಿರುವ ವೀರಶೈವ ಸಮಾವೇಶ ಕುರಿತಂತೆ ಶನಿವಾರ ಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ವೀರಶೈವ ಸಮಾಜದ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ವೀರಶೈವರು ಒಗ್ಗೂಡ ಬೇಕು. ಆಗ ಸಮಾಜ ಬಲಿಷ್ಠ ವಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತ ರಾಗಿ ಒಂದಾಗಬೇಕೆಂದರು. ರಾಜಕೀಯವಾಗಿ ಯಾರು ಯಾವ ಪಕ್ಷದಲ್ಲೇ ಇದ್ದರೂ, ಸಮಾಜದ ವಿಷಯದಲ್ಲಿ ಅವುಗಳನ್ನೆಲ್ಲಾ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕೆಂದರು. ತಾ. 18ರ ಸಮಾವೇಶಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಆಗಮಿಸಲಿದ್ದಾರೆ ಎಂದರು.
ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಮಾತನಾಡಿ, ಅಕ್ಟೋಬರ್ 16ರಂದು ಕೊಡ್ಲಿಪೇಟೆಯ ಕಲ್ಲುಮಠದ ಆವರಣದಲ್ಲಿ ಕ್ರೀಡಾಕೂಟ ಹಾಗೂ 18ರಂದು ಕಿರಿಕೊಡ್ಲಿ ಮಠದ ಶಾಲೆಯ ಆವರಣದಲ್ಲಿ ಸಮಾವೇಶ ನಡೆಸಲು ಈಗಾಗಲೇ ಸಿದ್ದತೆ ನಡೆಸಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯ ಆರಂಭಿಸಲಾಗಿದೆ ಎಂದರು.
ಜಿಲ್ಲಾ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಉಷಾ ತೇಜಸ್ವಿ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ವೀರಶೈವ ಮಹಿಳೆಯರು ಸಾಧನೆ ತೋರಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಉತ್ತಮ ನಿರ್ವಾಹಕಿಯಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಮಾಯಾ ಗಿರೀಶ್, ಹಾಗೂ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಜಲಜಾ ಶೇಖರ್ ರವರನ್ನು ಗೌರವಿಸಲಾಗುವದೆಂದರು.
ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ನಂಜುಂಡ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಯತೀಶ್, ಸಾವಿತ್ರಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ವಿಶ್ವನಾಥ್, vIರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ್, ಜಿಲ್ಲಾ ಸಮಿತಿ ಸದಸ್ಯ ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.