ಸೋಮವಾರಪೇಟೆ, ನ. 19: ಕಾಂಗ್ರೆಸ್‍ನಲ್ಲಿ ಜಾತಿಯ ವಿಷ ಬೀಜವನ್ನು ಬಿತ್ತಿ ಪಕ್ಷದಲ್ಲಿ ಒಡಕನ್ನು ಮೂಡಿಸುವ ಪ್ರಯತ್ನಕ್ಕೆ ಕೈಹಾಕಿರುವ ವ್ಯಕ್ತಿಗಳ ವಿರುದ್ಧ ಹೈಕಮಾಂಡ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಕೆಡಿಪಿ ನಾಮನಿರ್ದೇಶನ ಸದಸ್ಯ ಎನ್.ಎನ್.ಧರ್ಮಪ್ಪ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕೆಪಿಸಿಸಿ ಆಯ್ಕೆ ಮಾಡುತ್ತದೆ. ಪಕ್ಷದ ಸಂಘಟನೆಯಲ್ಲಿ ಮುಂಚೂಣಿ ಯಲ್ಲಿರುವ ಯೋಗ್ಯ ಹಾಗೂ ಸಮರ್ಥ ವ್ಯಕ್ತಿಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕು. ಜಾತಿ, ಧರ್ಮ, ಸಮುದಾಯದ ಹೆಸರಿನಲ್ಲಿ ರಾಜಕೀಯ ಸಲ್ಲದು. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರ ಗಮನಕ್ಕೆ ತರಲಾಗಿದೆ ಎಂದರು.

125 ವರ್ಷಗಳ ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಜಾತ್ಯತೀತ ಮೂಲ ಆಶಯದೊಂದಿಗೆ ಅಸ್ತಿತ್ವಕ್ಕೆ ಬಂದ ಪಕ್ಷ. ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷ ಅಧಿಕಾರ ನೀಡುತ್ತದೆ ಎಂದರು. ಈ ಮಧ್ಯೆ ಸಭೆ ನಡೆಸಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಶಿರಂಗಾಲ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಹೆಚ್.ಎ. ನಾಗರಾಜ್, ಎನ್.ಪಿ. ಮಂಜುನಾಥ್, ಕಿರಗಂದೂರು ಗ್ರಾ.ಪಂ. ಸದಸ್ಯ ಭರತ್‍ಕುಮಾರ್, ಎಸ್.ಎಸ್. ವಿವೇಕಾನಂದ ಮತ್ತಿತರರು ಉಪಸ್ಥಿತರಿದ್ದರು.