ವೀರಾಜಪೇಟೆ, ನ. 15: ಸ್ವಾತಂತ್ರ್ಯ ಹೋರಾಟಗಾರ, ಕೊಡಗಿನ ಗಾಂಧಿ ಎಂದು ಕರೆಯಲ್ಪಡುವ ಅಮ್ಮತ್ತಿ ಹೊಸೂರಿನ ದಿ: ಪಂದ್ಯಂಡ ಐ ಬೆಳ್ಯಪ್ಪ ಅವರು ದಶಕಗಳ ಹಿಂದೆಯೇ ರಾಜಕೀಯ ಧುರೀಣ, ಸಮಾಜ ಸೇವೆಯ ಧೀಮಂತ ವ್ಯಕ್ತಿಯಾಗಿದ್ದು ಇವರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕೆಂದು ಹಿರಿಯರಾದ ನೆಲ್ಲಮಕ್ಕಡ ಸೋಮಯ್ಯ ಹೇಳಿದರು.

ಅಮ್ಮತ್ತಿಯಿಂದ ಹೊಸೂರು ಗ್ರಾಮಕ್ಕೆ ತೆರಳುವ ರಸ್ತೆಗೆ ಪಂದ್ಯಂಡ ಐ ಬೆಳ್ಯಪ್ಪ ರಸ್ತೆ ನಾಮಫಲಕವನ್ನು ಅನಾವರಣಗೊಳಿಸಿ ಸೋಮಯ್ಯ ಅವರು ಕಳೆದ 1951ರಲ್ಲಿ ಮದ್ರಾಸ್ ಯೂನಿವರ್ಸಿಟಿ ಅಧೀನದಲ್ಲಿ ಕೊಡಗಿಗೆ ಪ್ರಪ್ರಥಮವಾಗಿ ಪದವಿ ಕಾಲೇಜನ್ನು ಮಡಿಕೇರಿಯಲ್ಲಿ ಸ್ಥಾಪಿಸಲು ಕೇಂದ್ರದಿಂದ ಅನುಮತಿ ತಂದು ಜಿಲ್ಲೆಗೆ ಪದವಿ ಕಾಲೇಜನ್ನು ಪರಿಚಯಿಸಿದ ವ್ಯಕ್ತಿ ಬೆಳ್ಯಪ್ಪ. ಅವರು ನಿಸ್ವಾರ್ಥ ಸಮಾಜ ಸೇವಕರಾಗಿದ್ದು ಅಂದಿನ ಕಾಲದಲ್ಲಿಯೇ ಅನೇಕ ಜನಪರ ಸೇವೆಗೆ ತೊಡಗಿಸಿಕೊಂಡಿದನ್ನು ಕೊಡಗಿನ ಜನತೆ ಮರೆಯುವಂತಿಲ್ಲ. ಅವರ ಸೇವೆಯ ಸ್ಮರಣೆಗಾಗಿ ಅಮ್ಮತ್ತಿ ಹೊಸೂರು ರಸ್ತೆಗೆ ದಿವಂಗತ ಬೆಳ್ಯಪ್ಪ ಹೆಸರಿನÀ ನಾಮಕರಣ ಅಗತ್ಯ ಎಂದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಮಾತನಾಡಿ ಅನೇಕ ದಶಕಗಳ ಹಿಂದೆಯೇ ಸಮಾಜ ಸೇವೆಯಲ್ಲಿ ತೊಡಗಿದ್ದ ದಿ. ಪಂದ್ಯಂಡ ಬೆಳ್ಯಪ್ಪ ಅವರ ಹೆಸರು ಅಮರವಾಗಲು ಅವರ ಹೆಸರಿನಲ್ಲಿ ಅವರ ಸಾಧನೆ, ಸಮಾಜಸೇವೆ, ಜೀವನ ಚರಿತ್ರೆಯ ಕುರಿತ ಪುಸ್ತಕವನ್ನು ಹೊರ ತಂದು ಅವರ ಸೇವೆಯನ್ನು ಯುವ ಜನತೆಗೆ ಪರಿಚಯಿಸುವಂತೆ ಮಾಡಬೇಕು. ಕೊಡವ ಸಮಾಜದ ಮಹಾಸಭೆಯ ಸಮ್ಮತಿ ಮೇರೆಗೆ ಪುಸ್ತಕ ಹೊರತರಲು ರೂ 50,000 ಸಹಾಯ ಧನ ನೀಡಲಾಗುವದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಮ್ಮತ್ತಿ ಹಿರಿಯರ ವಿಶ್ರಾಂತಿ ಕೇಂದ್ರದ ಅಧ್ಯಕ್ಷ ಕುಟ್ಟಂಡ ಎನ್ ಚಿಣ್ಣಪ್ಪ ಮಾತನಾಡಿ ಬೆಳ್ಯಪ್ಪ ಅವರ ಸೇವೆಯನ್ನು ಪರಿಗಣಿಸಿ ಅವರ ತವರಾದ ಅಮ್ಮತ್ತಿಯಲ್ಲಿ ಪುತ್ಥಳಿಯನ್ನು ಸ್ಥಾಪಿಸಿಲು ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವದು. ಇದಕ್ಕಾಗಿ ಸಮಿತಿಯನ್ನು ರಚಿಸಿದಲ್ಲಿ ಹಿರಿಯರ ವಿಶ್ರಾಂತಿ ಕೇಂದ್ರ ಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.

ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಗೋಪಿ, ಬೆಳ್ಯಪ್ಪ ಅವರ ಪುತ್ರ ವಿಜುಬೆಳ್ಯಪ್ಪ ಮಾತನಾಡಿದರು. ಸಮಾರಂಭದಲ್ಲಿ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಚೀರ ರೋನ ಭೀಮಯ್ಯ, ಬೆಳ್ಯಪ್ಪ ಅವರ ಕುಟುಂಬದ ಮಕ್ಕಳು ಹಾಜರಿದ್ದರು. ಅಮ್ಮತ್ತಿಯ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕಾವಾಡಿಚಂಡ ಯು ಗಣಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಶ್ರಾಂತಿ ಕೇಂದ್ರದ ಗೌರವ ಕಾರ್ಯದರ್ಶಿ ಹಾಗೂ ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯ ಮಾಚಿಮಂಡ ಸುರೇಶ್ ಅಯ್ಯಪ್ಪ ಸ್ವಾಗತಿಸಿ ನಿರೂಪಿಸಿದರು. ಕೇಂದ್ರದ ಉಪಾಧ್ಯಕ್ಷ ಕೇಚಮಾಡ ಕುಶಾಲಪ್ಪ ವಂದಿಸಿದರು.

ಈ ಸಂದರ್ಭ ಕಾರ್ಮಾಡು ಪಂಚಾಯಿತಿಯ ಸದಸ್ಯರು, ಅಮ್ಮತ್ತಿ, ಹೊಸೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.