ಸೋಮವಾರಪೇಟೆ, ಆ.27: ಚನ್ನರಾಯಪಟ್ಟಣ ಜೆ.ಎಂ.ಎಫ್.ಸಿ. ಪ್ರಧಾನ ನ್ಯಾಯಾಧೀಶರ ಮೇಲೆ ಆಗಸ್ಟ್ 23 ರಂದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಲ್ಲಿನ ಸಿವಿಲ್ ನ್ಯಾಯಾಲಯದ ವಕೀಲರುಗಳು ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ಸಮಾಜದಲ್ಲಿ ಸರ್ವರಿಗೂ ನ್ಯಾಯ ಕಲ್ಪಿಸುವ ನ್ಯಾಯಾಧೀಶರ ಮೇಲೆ ದೌರ್ಜನ್ಯವೆಸಗಿರುವ ಚಿಕ್ಕನಾಯಕನಹಳ್ಳಿ ಸರ್ಕಲ್ ಇನ್ಸ್‍ಪೆಕ್ಟರ್ ಮಾರಪ್ಪ ಹಾಗೂ ಚನ್ನರಾಯಪಟ್ಟಣದ ಇನ್ಸ್‍ಪೆಕ್ಟರ್ ರಂಗಸ್ವಾಮಿ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ರಾಜ್ಯ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿರಿಯ ವಕೀಲ ಎಚ್.ಸಿ. ನಾಗೇಶ್ ಆಗ್ರಹಿಸಿದರು.