ಮಡಿಕೇರಿ, ಜು. 28: ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷಕ್ಕೆ ಒಳಪಟ್ಟಿರಬೇಕು. ವರ್ಗ-1 ರ ಅಭ್ಯರ್ಥಿಗಳಿಗೆ ಆದಾಯ ಮಿತಿ ರೂ. 3.50 ಲಕ್ಷ ಆಗಿರುತ್ತದೆ. ವರ್ಗ-1 ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವದು. ವರ್ಗ-1 ರಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಇತರೆ ವರ್ಗಗಳಲ್ಲಿ ಆಯ್ಕೆ ಮಾಡಲಾಗುವದು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ವಕೀಲರಾಗಿ ಕಾರ್ಯನಿರ್ವಹಿಸಲು ನಿಗದಿಪಡಿಸ ಲಾದ ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷದ ಒಳಗಿರುವವರು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 30 ವರ್ಷದೊಳಗಿರಬೇಕು. ವರ್ಗ-1 ರ ಅಭ್ಯರ್ಥಿಗೆ 1 ವರ್ಷ ರಿಯಾಯಿತಿ ಇರುತ್ತದೆ. ಹೆಸರನ್ನು ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿರಬೇಕು. ಕಾನೂನು ತರಬೇತಿಯು 4 ವರ್ಷಗಳ ಅವಧಿ ಯಾಗಿದ್ದು, ಮಾಸಿಕ ರೂ. 2 ಸಾವಿರ ದಂತೆ ಶಿಷ್ಯವೇತನ ನೀಡಲಾಗುವದು.

ಕಾನೂನು ತರಬೇತಿಯನ್ನು ಜಿಲ್ಲೆಯಿಂದ ಹಿಂದುಳಿದ ವರ್ಗಗಳ 8 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅವಕಾಶವಿರುತ್ತದೆ. ಆಯ್ಕೆಯಾದ ಅಭ್ಯರ್ಥಿಯು ವಕೀಲ ತರಬೇತಿಗೆ ಹೋಗುವ ಮುನ್ನ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟಲ್ಲಿ ತರಬೇತಿ ವೆಚ್ಚಕ್ಕೆ ಶೇ. 10 ರಂತೆ ಬಡ್ಡಿ ಸೇರಿಸಿ ಸರ್ಕಾರಕ್ಕೆ ಪಾವತಿ ಮಾಡುತ್ತೇನೆಂದು ರೂ. 20 ರ ಛಾಪಾ ಕಾಗದದಲ್ಲಿ ಬರೆದು ಕೊಡಬೇಕು. ಸುಳ್ಳು ಮಾಹಿತಿ ಹಾಗೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಅಭ್ಯರ್ಥಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವದು ಹಾಗೂ ಅರ್ಜಿ ನಮೂನೆಗಳನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯವರಿಂದ ಪಡೆದು ಆಗಸ್ಟ್ 31 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ ಮಡಿಕೇರಿ. ಇವರನ್ನು ಕಚೇರಿ ವೇಳೆಯಲ್ಲಿ ಹಾಗೂ ಕಚೇರಿ ದೂರವಾಣಿ: 08272- 225628ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.