ಮಡಿಕೇರಿ, ಅ. 8: ಅನ್ಯಾಯವನ್ನು ತಡೆದು ನ್ಯಾಯವನ್ನು ಎತ್ತಿ ಹಿಡಿದರೆ ಮಾತ್ರ ನಾಡ ಹಬ್ಬ ದಸರಾ ಅರ್ಥಪೂರ್ಣವೆನಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅಭಿಪ್ರಾಯಪಟ್ಟರು.
ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿಯಿಂದ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಶನಿವಾರ ರಾತ್ರಿ ನಡೆದ ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಉತ್ಸವ ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಮೈಸೂರು ದಸರಾದಂತೆ ಮಡಿಕೇರಿಯಲ್ಲೂ ದಸರಾ ಹಬ್ಬವನ್ನು ಅತೀ ವಿಜೃಂಭಣೆÉಯಿಂದ ಆಚರಿಸಲಾಗುತ್ತಿದೆ. ದಸರಾ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿದೆ. ಅನ್ಯಾಯಗಳನ್ನು ತಡೆದು ನಿಲ್ಲಿಸಿ ನ್ಯಾಯ ದೊರಕಿಸುವ ಪ್ರತೀಕವಾಗಬೇಕೆಂದು ಮನವಿ ಮಾಡಿದರು.
ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿದೆ. ಕೊಡಗು ಜಿಲ್ಲೆಯ ಹಲವು ಸಮಸ್ಯೆಗಳಿಗೆ ಸರ್ಕಾರ ಸದಾ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಯುವಕರು ಸಮಾಜದ ಆಸ್ತಿಯಾಗಿದ್ದು ಉತ್ತಮ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.