ಗ್ರಾ.ಪಂ. ಸದಸ್ಯನ ವಿರುದ್ಧ ಕ್ರಮಕ್ಕೆ ಒತ್ತಾಯ
ಸಿದ್ದಾಪುರ, ಜ. 6: ಗುಹ್ಯ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತದಾರರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡದೆ, ಪಡಿತರ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಗ್ರಾ.ಪಂ. ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಪಿಐ(ಎಂ) ಪಕ್ಷ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಗ್ರಾಮ ಸಮಿತಿ ಸದಸ್ಯ ಅನಿಲ್ ಕುಟ್ಟಪ್ಪ, ನ್ಯಾಯಬೆಲೆ ಅಂಗಡಿ ಆರಂಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಅಂಗಡಿ ಮಾಲೀಕನ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡ ಸಿದ್ದಾಪುರ ಗ್ರಾ.ಪಂ. ಸದಸ್ಯ ಮಂಜುನಾಥ್ ಮಾಲೀಕನ ಜೊತೆ ಸ್ನೇಹ ಸಂಪಾದಿಸಿ ಅಂಗಡಿಯನ್ನು ಸಂಪೂರ್ಣವಾಗಿ ತನ್ನ ಕಪಿಮುಷ್ಟಿಯಲ್ಲಿರಿಸಿ ಕಾರ್ಡ್ ನೋಂದಾವಣಿ ಸೇರಿದಂತೆ ನ್ಯಾಯಬೆಲೆ ಅಂಗಡಿಯ ಎಲ್ಲಾ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿ ಸಮರ್ಪಕವಾಗಿ ಪಡಿತರ ವಿತರಣೆ ಮಾಡದೆ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ ಎಂದಿದ್ದಾರೆ.
ನ್ಯಾಯಬೆಲೆ ಅಂಗಡಿ ವಿರುದ್ಧ ಪ್ರಶ್ನೆ ಮಾಡಿದ ಗ್ರಾಹಕರಿಗೆ ಯಾವದೇ ಪಡಿತರ ಸಾಮಗ್ರಿಗಳನ್ನು ನೀಡದೆ ಪಡಿತರ ಚೀಟಿಯನ್ನು ರದ್ದುಗೊಳಿಸುವದಾಗಿ ಬೆದರಿಕೆ ಒಡ್ಡುತ್ತಿರುವದಾಗಿ ಆರೋಪಿಸಿದರು.
ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ವಿರುದ್ಧ ಗ್ರಾ.ಪಂ. ದೂರು ನೀಡಿದ್ದ ಹಿನ್ನೆಲೆ ಜಿಲ್ಲಾ ಆಹಾರ ಜಾಗೃತಿ ಸಮಿತಿ ಸದಸ್ಯರು ಅಗಮಿಸಿ ಪರಿಶೀಲಿಸಿದ್ದು, ಮೇಲ್ನೊಟಕ್ಕೆ ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ ನಡೆದಿರುವದು ಕಂಡುಬಂದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಸಮಿತಿ ಸದಸ್ಯರು ಪರಿಶೀಲನೆ ಸಂದರ್ಭ ಗ್ರಾ.ಪಂ. ಸದಸ್ಯನನ್ನು ಸಂರಕ್ಷಿಸಲು ಜನಪ್ರತಿನಿಧಿಗಳು ಕಾಂಗ್ರೆಸ್‍ನ ಮಾಜಿ ಅಧ್ಯಕ್ಷರು ರಾಜಕೀಯ ಒತ್ತಡ ಹೇರಿರುವದು ಖಂಡನೀಯ.
ಸಂಬಂಧಪಟ್ಟ ಲೈಸೆನ್ಸ್‍ದಾರರು ನ್ಯಾಯಬೆಲೆ ಅಂಗಡಿಯನ್ನು ನಡೆಸಬೇಕು. ಗ್ರಾ.ಪಂ. ಸದಸ್ಯನು ಯಾವದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಬಡವರಿಗೆ ನೀಡಬೇಕಾದ ಪಡಿತರ ಸಾಮಗ್ರಿಗಳನ್ನು ಅದೇ ಪಕ್ಷದ ಗ್ರಾ.ಪಂ. ಸದಸ್ಯನೇ ಕಾಳಸಂತೆಯಲ್ಲಿ ಮಾರಾಟ ಮಾಡುವದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಗ್ರಾ.ಪಂ. ಸದಸ್ಯನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆತನ ಸದಸತ್ವವನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಪಕ್ಷದ ಪ್ರಮುಖರಾದ ಸಿ.ಯು. ಮುಸ್ತಫಾ ಮಾತನಾಡಿ, ಕೆಲವು ವ್ಯಕ್ತಿಗಳು ನ್ಯಾಯಬೆಲೆ ಅಂಗಡಿಯನ್ನು ಸ್ಥಳಾಂತರಿಸಲು ಹುನ್ನಾರ ನಡೆಸುತ್ತಿದ್ದು, ಯಾವದೇ ಕಾರಣಕ್ಕೂ ಈ ಭಾಗದಿಂದ ನ್ಯಾಯಬೆಲೆ ಅಂಗಡಿಯನ್ನು ಸ್ಥಳಾಂತರಿಸಬಾರದೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಪವಿತ್ರನ್ ಮತ್ತು ರಾಮನ್ ಕುಟ್ಟಿ ಇದ್ದರು.