ಸಿದ್ದಾಪುರ, ಡಿ. 30: ಗುಹ್ಯ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳಿಗೆ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ನೀಡಿದ ಅರ್ಜಿಯ ಬಗ್ಗೆ ಗ್ರಾ.ಪಂ ಸಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ, ನ್ಯಾಯಬೆಲೆ ಅಂಗಡಿಯನ್ನು ಪರಿಶೀಲಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಸಿದ್ದಾಪುರ ಗ್ರಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರ ಅರ್ಜಿಯ ಬಗ್ಗೆ ಚರ್ಚಿಸಲಾಯಿತು. ಗುಹ್ಯ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳಿಗೆ ಸರಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡಲಾಗುತ್ತಿದೆ. ಪ್ರತಿ ಪಡಿತರ ಚೀಟಿ ಹೊಂದಿರುವವರಿಂದ ಸಾಗಾಟ ವೆಚ್ಚ ಎಂದು ಹೆಚ್ಚು ಹಣ ಪಡೆಯಲಾಗುತ್ತಿದೆ. ಮಾತ್ರವಲ್ಲದೇ ನ್ಯಾಯಬೆಲೆ ಅಂಗಡಿ ದಿನವಿಡಿ ಮುಚ್ಚಿರುತ್ತಿದ್ದು, ಸಂಜೆ 6 ಗಂಟೆ ಮೇಲೆ ಮಾತ್ರ ತೆರೆದಿರುತ್ತದೆ. ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿ, ಗ್ರಾ.ಪಂ ನ ಉತ್ಪಾದನಾ ಸಮಿತಿಯ ತಂಡ ನ್ಯಾಯಬೆಲೆಗೆ ಭೇಟಿ ನೀಡಿ ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ನ್ಯಾಯಬೆಲೆ ಅಂಗಡಿಯ ಮೇಲೆ ಕ್ರಮ ಕೈಗೊಳ್ಳಲು ಆಹಾರ ಇಲಾಖೆಗೆ ಶಿಫಾರಸ್ಸು ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆಯೂ ಕೂಡ ಗುಹ್ಯದ ನ್ಯಾಯಬೆಲೆ ಅಂಗಡಿಯ ವಿರುದ್ಧ ಗ್ರಾಮಸ್ಥರು ಪಂಚಾಯಿತಿಗೆ ಹಾಗೂ ಆಹಾರ ಇಲಾಖೆಗೆ ದೂರು ನೀಡಿದ್ದರು.
ಸಭೆಯಲ್ಲಿ ಗ್ರಾ.ಪಂ ವ್ಯಾಪ್ತಿಯ ಕುಡಿಯುವ ನೀರು ಸಮಸ್ಯೆ ಬಗ್ಗೆ ಚರ್ಚಿಸಲಾಯಿತು. ಬೇಸಿಗೆ ಆರಂಭವಾಗುತ್ತಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಿದ್ದಾಪುರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಬಗ್ಗೆ ಚರ್ಚಿಸಿ, ಈಗಾಗಲೇ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಪೈಸಾರಿ ಜಾಗ ನೀಡುವ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದು ಪಿ.ಡಿ.ಓ ವಿಶ್ವನಾಥ್ ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭ 14ನೇ ಹಣಕಾಸಿನ ಹೆಚ್ಚುವರಿ ಅನುದಾನ, ವಸತಿ ಯೋಜನೆಯ ಅನುಷ್ಠಾನ, ಎಂ.ಜಿ.ಎನ್.ಆರ್.ಇ.ಜಿ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು.
ಪಿ.ಡಿ.ಓ ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ರಾಜೇಶ್ವರಿ ಸೇರಿದಂತೆ ಇತರ ಸದಸ್ಯರು ಹಾಜರಿದ್ದರು.