ಸೋಮವಾರಪೇಟೆ, ಜ.26: ದೇಶದಲ್ಲಿ ಮಿತಿಮೀರಿದ್ದ ಭ್ರಷ್ಟಾಚಾರ ಮತ್ತು ಭಯೋತ್ಪಾದಕ ಕೃತ್ಯಗಳ ಮೇಲೆ ನೋಟ್ ಬ್ಯಾನ್ ಅಸ್ತ್ರದ ಮೂಲಕ ಧಾಳಿ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಆರ್ಥಿಕಾಭಿವೃದ್ಧಿ ಉನ್ನತಿಗೊಳ್ಳಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 68ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದುವರೆಗೂ ದೇಶದ ಆರ್ಥಿಕತೆಯ ಶೇ.30ಕ್ಕೂ ಅಧಿಕ ಖೋಟಾ ನೋಟು, ಶೇ.70ಕ್ಕೂ ಅಧಿಕ ಕಪ್ಪುಹಣ ಇದ್ದುದು ನೋಟ್ ಬ್ಯಾನ್ ಕ್ರಮದಿಂದಾಗಿ ತನ್ನ ಮೌಲ್ಯ ಕಳೆದುಕೊಂಡು ಬೀದಿಗೆ ಬಿದ್ದಂತಾಗಿದೆ. ಇದರಿಂದಾಗಿ ಭ್ರಷ್ಟಾಚಾರ ಹಾಗೂ ಭಯೋತ್ಪಾದಕ ಕೃತ್ಯಗಳು ಇಳಿಮುಖವಾಗಿದ್ದು, ನಗದು ರಹಿತ ವಹಿವಾಟಿನಿಂದಾಗಿ ಆರ್ಥಿಕತೆಯಲ್ಲಿ ಪಾರದರ್ಶಕತೆ ಹೆಚ್ಚಾಗುವದರೊಂದಿಗೆ ದೇಶದ ಪ್ರಗತಿಗೆ ವೇಗ ದೊರಕಲಿದೆ ಎಂದರು.

‘ಹುಲಿ ಹುಟ್ಟಿದ ನಾಡಲ್ಲಿ ಹುಲಿಯೇ ಹುಟ್ಟುತ್ತದೆ’ ಎಂಬ ಮಾತಿಗೆ ಕೊಡಗು ಜಿಲ್ಲೆ ಸಾಕ್ಷಿಯಾಗಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರನ್ನು ದೇಶಕ್ಕೆ ನೀಡಿದ ಜಿಲ್ಲೆ ಇಂದಿಗೂ ಸೈನಿಕ ಪರಂಪರೆಯನ್ನು ಎತ್ತಿ ಹಿಡಿಯುತ್ತಿದೆ. ಕ್ರೀಡೆಯಲ್ಲೂ ಸಾಧನೆ ತೋರುತ್ತಿದೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಆಯ್ಕೆಯಾಗುವ ಮೂಲಕ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ. ಕೆಡೆಟ್‍ಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಶಂಶಿಸಿದರು.

ಮುಖ್ಯ ಅತಿಥಿಗಳಾಗಿದ್ದ ತಾ.ಪಂ. ಉಪಾದ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಶಿಸ್ತು, ಆತ್ಮವಿಶ್ವಾಸ, ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಕರೆ ನೀಡಿದರು.

ತಹಶೀಲ್ದಾರ್ ಕೃಷ್ಣ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶವನ್ನು ನೀಡುತ್ತಾ, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಇತರ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವಂತಾಗಬೇಕು ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ವಿಜಯಲಕ್ಷ್ಮೀ, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕೃಷಿ ಇಲಾಖಾ ನಿರ್ದೇಶಕ ಡಾ. ರಾಜಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ನಿವೃತ್ತ ಸೈನಿಕ ಎಸ್.ಕೆ. ನಾಗರಾಜು ಅವರನ್ನು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸರ್ವ ಶಿಕ್ಷಣ ಅಭಿಯಾನ ಮತ್ತು ಸ್ಕಂದ ಸಂಸ್ಥೆ ಸಹಯೋಗದಲ್ಲಿ ವಿಶೇಷ ಅಗತ್ಯತೆ ಇರುವ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು. ಧ್ವಜಾರೋಹಣಕ್ಕೆ ಮೊದಲು ಜೈ ಜವಾನ್ ಮಾಜಿ ಸೈನಿಕರ ಸಂಘ, ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.