ಮಡಿಕೇರಿ, ನ.15: ಕೇಂದ್ರ ಸರ್ಕಾರ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವದರಿಂದ ಜಿಲ್ಲೆಯಲ್ಲಿ ಇದುವರೆಗೆ ರೂ. 240 ಕೋಟಿ ಮೊತ್ತ ಸಂಗ್ರಹವಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ. ದೇವಯ್ಯ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರ ಸಭೆ ಇಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಅವರು ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ರೂ. 57 ಕೋಟಿ ಹಣ ಸಂಗ್ರಹವಾಗಿದೆ. ಜಿಲ್ಲೆಯಲ್ಲಿ 174 ಬ್ಯಾಂಕ್ ಶಾಖೆಗಳಿದ್ದು, ರೂ. 500 ಹಾಗೂ 1000 ಮುಖಬೆಲೆಯ ರೂ. 40 ಕೋಟಿ ನಗದು ಹಣ ವಿನಿಮಯ ಗೊಂಡಿದೆ. ಇದೀಗ ಜಿಲ್ಲೆಯ ವಿವಿಧ ಬ್ಯಾಂಕ್ಗಳಲ್ಲಿ ರೂ. 2000 ಮುಖಬೆಲೆಯ ರೂ. 400 ಕೋಟಿ ಹಣ ದಾಸ್ತಾನಿದೆ. ಜಿಲ್ಲೆಯ ಬ್ಯಾಂಕ್ಗಳಲ್ಲಿ ರೂ. 100ರ ಮುಖಬೆಲೆಯ ನೋಟುಗಳ ಸಮಸ್ಯೆಯಿದ್ದು, ಎಸ್ಬಿಐನಲ್ಲಿ ಮಾತ್ರ ರೂ. 1 ಕೋಟಿ ರೂ. 100ರ ಮುಖಬೆಲೆಯ ನೋಟುಗಳಿವೆ.
ಈ ನೋಟನ್ನು ವಿವಿಧ ಬ್ಯಾಂಕ್ಗೆ ಹಂಚಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಜಿಲ್ಲೆಯಲ್ಲಿ ಚಿಲ್ಲರೆ ಸಮಸ್ಯೆ ಬಿಟ್ಟರೆ ಬೇರೆ ಸಮಸ್ಯೆಗಳಿಲ್ಲ. ಎಟಿಎಂ ಸ್ಥಗಿತಗೊಂಡಿದ್ದು, ಎಸ್ಬಿಐನ ಎಟಿಎಂ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭ ಎಸ್ಬಿಐ, ಎಸ್ಬಿಎಂ, ಕೆನರಾ, ಐಸಿಐಸಿಐ, ಕೋಟಕ್ ಮಹೀಂದ್ರ ಸೇರಿದಂತೆ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಉಪಸ್ಥಿತರಿದ್ದರು.