ಶನಿವಾರಸಂತೆ, ನ. 27: ಪಟ್ಟಣದ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗೆ ಹಳೇ ನೋಟು ಹಾಕಲು ಬಂದ ಗ್ರಾಹಕರನ್ನು ಸಿಬ್ಬಂದಿ ಹಿಂದಕ್ಕೆ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಅಂಚೆ ಕಚೇರಿಗೆ ಬರುತ್ತಿದ್ದ ಗ್ರಾಹಕರಿಗೆ ಅಧಿಕಾರಿ, ಸಿಬ್ಬಂದಿಗಳು ಎಸ್.ಬಿ. ಖಾತೆಗೆ ಹಣ ಹಾಕುವ, ತೆಗೆಯುವ ವ್ಯವಹಾರ ನಿಲ್ಲಿಸಲಾಗಿದೆ ಎಂದು ಕಾರಣ ಹೇಳಿ ವಾಪಾಸ್ಸು ಕಳುಹಿಸುತ್ತಿದ್ದರು. ಹಳ್ಳಿಗಳಿಂದ ಬರುತ್ತಿದ್ದ ನೂರಾರು ಗ್ರಾಹಕರು ವಿಧಿಯಿಲ್ಲದೆ ಹಿಂದಿರುಗುತ್ತಿದ್ದರು.

ಈ ವಿಚಾರ ನಂಬದ ಕೆಲ ಗ್ರಾಹಕರು ಬೇರೆ ಊರಿನ ಅಂಚೆ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಉಳಿತಾಯ ಖಾತೆಗೆ ಹಣ ತೆಗೆದುಕೊಳ್ಳುತ್ತಿರುವ ಉತ್ತರ ದೊರೆಯಿತು. ಆಕ್ರೋಶಗೊಂಡ ಗ್ರಾಹಕರು ಮರಳಿ ಅಂಚೆ ಕಚೇರಿಗೆ ತೆರಳಿ ಪ್ರಶ್ನಿಸಿದಾಗ, ಏನ್ ಮಾಡೋದು.. ಸರ್ವರ್ ಪ್ರಾಬ್ಲಮ್, ಬೇರೆ ಊರಿಗೆ ಹೋಗಿ ಹಾಕಿ. ಸರಿಯಾದರೆ ನೋಡೋಣ ಎಂಬ ಉತ್ತರ ದೊರೆಯಿತು. ಸಂಜೆಯವರೆಗೂ ಅಂಚೆ ಕಚೇರಿಯಲ್ಲಿ ಗ್ರಾಹಕರ ಯಾವ ವ್ಯವಹಾರವೂ ನಡೆಯಲಿಲ್ಲ.

ಪಟ್ಟಣದ ಅಂಚೆ ಕಚೇರಿ ಬಗ್ಗೆ ಗ್ರಾಹಕರಿಗೆ ಮೊದಲೇ ಅಸಮಾಧಾನವಿತ್ತು. ಹಳೆ ನೋಟು ರದ್ದಾದಾಗಿನಿಂದ ನೂತನ ಉಳಿತಾಯ ಖಾತೆ ತೆರೆಯಬಯಸಿದ ಗ್ರಾಹಕರಿಗೆ ಈವರೆಗೂ ಅವಕಾಶ ನೀಡಲಿಲ್ಲ. ಹಳೆ ಖಾತೆದಾರರು ಮಾತ್ರ ವ್ಯವಹಾರ ಮಾಡುತ್ತಿದ್ದಾರೆ. ನಿಗಧಿತ ಸಮಯದವರೆಗೆ ಅವಕಾಶ ನೀಡದೆ ಅರ್ಧ ಗಂಟೆ ಮೊದಲೇ ಕೌಂಟರ್ ಮುಚ್ಚಿ ಗ್ರಾಹಕರನ್ನು ಹಿಂದಿರುಗಿ ಹೋಗುವ ಹಾಗೆ ಮಾಡುತ್ತಿದ್ದಾರೆ. ಮಹಿಳಾ ಅಧಿಕಾರಿಯಿಂದ ಹಿಡಿದು ಸಿಬ್ಬಂದಿಯವರೆಗೂ ಉದ್ಧಟತನದ ಉತ್ತರಗಳು ಗ್ರಾಹಕರಲ್ಲಿ ಅಸಮಾಧಾನ ಮೂಡಿಸಿದೆ. ಪಟ್ಟಣದ ಅಂಚೆ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯ, ತಾಳ್ಮೆಯಿಂದ ವರ್ತಿಸುತ್ತಿಲ್ಲ. ನಿಗದಿತ ಅವಧಿಗೂ ಮೊದಲೇ ವ್ಯವಹಾರ ಸ್ಥಗಿತಗೊಳಿಸುತ್ತಾರೆ. ಬ್ಯಾಂಕುಗಳಲ್ಲಿ ಹೀಗಿಲ್ಲ. ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೌಜನ್ಯದಿಂದಲೇ ವರ್ತಿಸುತ್ತಾರೆ ಎನ್ನುತ್ತಾರೆ ಗ್ರಾಹಕರಾದ ರಾಜು, ಪ್ರಕಾಶ್ ಹಾಗೂ ಗಿರೀಶ್.