ಸೋಮವಾರಪೇಟೆ, ಅ. 9: ಪಟ್ಟಣದ ಅಶೋಕ ನಗರದಲ್ಲಿ ನಿವೇಶನ ರಹಿತ ಬಡವರಿಗೆ ಮೀಸಲಿಟ್ಟಿದ್ದ ಉಚಿತ ನಿವೇಶನಗಳನ್ನು ಉಳ್ಳವರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ವಿತರಿಸಿದ್ದು, ಉಳಿದ ನಿವೇಶನಗಳನ್ನಾದರೂ ನೈಜ ಬಡ ಫಲಾನುಭವಿಗಳಿಗೆ ವಿತರಿಸಬೇಕು ತಪ್ಪಿದ್ದಲ್ಲಿ ತಮಟೆ ಚಳುವಳಿ ಹಮ್ಮಿಕೊಳ್ಳಲಾಗುವದು ಎಂದು ನಿವೇಶನ ರಹಿತ ಹೋರಾಟ ಸಮಿತಿ ಹಾಗೂ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಎಚ್ಚರಿಸಿದ್ದಾರೆ.

ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಅಶೋಕನಗರದಲ್ಲಿ 134 ನಿವೇಶನಗಳಿಗೆ ವಿವಿಧ ಮಾನದಂಡಗಳನ್ನಿಟ್ಟು ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಮಾನದಂಡವನ್ನು ಗಾಳಿಗೆ ತೂರಿ, ನಿವೇಶನಗಳನ್ನು ಹಂಚಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಶೇ. 80 ರಷ್ಟು ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿವೆ. ಈಗ ಅಶೋಕನಗರದಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತಿವೆ. ನಿವೇಶನ ರಹಿತರ ಕಾಲನಿ ಈಗ ಡಾಲರ್ಸ್ ಕಾಲನಿಯಂತಾಗಿದೆ ಎಂದು ವ್ಯಂಗ್ಯವಾಡಿದರು.

ಇಂದಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಅಂದು ವಿರೋಧ ಪಕ್ಷದ ನಾಯಕಿಯಾಗಿದ್ದರು. ನಿವೇಶನ ಹಂಚಿಕೆಯಲ್ಲಿ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿ ಆಶ್ರಯ ಸಮಿತಿ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈಗ ಅದೇ ವಿಜಯಲಕ್ಷೀ ಅಧ್ಯಕ್ಷರಾಗಿರುವದರಿಂದ, ಉಳಿದ 24 ನಿವೇಶನಗಳನ್ನು ನಿವೇಶನ ರಹಿತ ಬಡವರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಂದೆ ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾದರೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು. ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮವನ್ನು ಬಯಲಿಗೆಳೆಯಲು ಸರ್ಕಾರ ಪ್ರಕರಣವನ್ನು ಸಿಐಡಿ ಅಥವಾ ಎಸಿಬಿ ತನಿಖೆಗೊಪ್ಪಿಸಬೇಕು ಎಂದು ಆಗ್ರಹಿಸಿದರು

ಗೋಷ್ಠಿಯಲ್ಲಿ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಸಹ ಕಾರ್ಯದರ್ಶಿ ಹೆಚ್.ಓ. ಪ್ರಕಾಶ್, ಸದಸ್ಯ ಚೆನ್ನಯ್ಯ, ನಿವೇಶನ ರಹಿತ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಪ್ರಕಾಶ್, ಕಿರಣ್ ಹಾಗೂ ರಿಯಾಜ್ ಇದ್ದರು.