ನಾಪೆÇೀಕ್ಲು, ಡಿ. 23: ನಾಪೆÇೀಕ್ಲು ವ್ಯಾಪ್ತಿಯ ನೆಲಜಿ ಶ್ರೀ ಇಗುತ್ತಪ್ಪ ದೇವಳ, ಕಕ್ಕುಂದ ಕಾಡು ಶ್ರೀ ವೆಂಕಟೇಶ್ವರ ದೇವಳ, ಕುಂಜಿಲ ಮತ್ತು ಪುಲಿಕೋಟು ಶ್ರೀ ಭಗವತಿ ದೇವಳಗಳಲ್ಲಿ ಷಷ್ಠಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು.ಮೊದಲ ಬಾರಿಗೆ ನೆಲಜಿ ಇಗ್ಗುತ್ತಪ್ಪ ದೇವಳದಲ್ಲಿ ಭಕ್ತಜನ ಸಂಘದ ವತಿಯಿಂದ ಸಾಮೂಹಿಕವಾಗಿ ಆಶ್ಲೇಷ ಬಲಿ, ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು. ಇಗ್ಗುತ್ತಪ್ಪ ದೇವಳದಲ್ಲಿ ಈಶ್ವರ ಲಿಂಗ ಮತ್ತು ಸುಬ್ರಮಣ್ಯ ದೇವರ ಮೂರ್ತಿ ಇರುವ ಕಾರಣ ಕಳೆದ ಒಂದು ವರ್ಷದಿಂದ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿ ಷಷ್ಠಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಬೈರಂಬಾಡ, ಹರಿಹರ, ಕೂಡಿಗೆ ಸೇರಿದಂತೆ ಕೆಲವೆಡೆ ಮಾತ್ರ ಸುಬ್ರಮಣ್ಯ ಕ್ಷೇತ್ರವಿದೆ. ಹೆಚ್ಚಿನ ಪೂಜೆ ಸೇವೆಗಳಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಕ್ತರು ಹೋಗಬೇಕಾಗಿದೆ. ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಇಲ್ಲಿ ಪ್ರತೀ ವರ್ಷ ಷಷ್ಠಿ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದ್ದು, ಭಕ್ತಾದಿಗಳು ಪೂಜೆ, ಸೇವೆ ಸಲ್ಲಿಸಬಹುದಾಗಿದೆ ಎಂದು ದೇವಳದ ಭಕ್ತ ಜನ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಕ್ತ ಜನ ಸಂಘದ ಕಾರ್ಯದರ್ಶಿ ಮಾಳೆಯಂಡ ಜಗದ್ ಈರಪ್ಪ, ಪದಾಧಿಕಾರಿಗಳು ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ದೇವಳದ ಪ್ರಧಾನ ಅರ್ಚಕ ರಮೇಶ ಶರ್ಮ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಸುಧೀರ್, ಸುದರ್ಶನ್, ಅಶೋಕ್ ಭಟ್ ನೆರವೇರಿಸಿದರು.