ಮಡಿಕೇರಿ, ಸೆ.29 : ಇತ್ತೀಚಿನ ದಿನಗಳಲ್ಲಿ ಕೆಲವು ಕಾಫಿ ಬೆಳೆಗಾರರು ಸಾಂಪ್ರದಾಯಿಕ ಕಾಫಿ ಕೃಷಿ ಪದ್ಧತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಕಾಫಿ ತೋಟದ ಮರಗಳನ್ನು ಸಂಪೂರ್ಣವಾಗಿ ಕಡಿದು ನೆರಳು ರಹಿತ ಕಾಫಿ ಕೃಷಿಗೆ ಮುಂದಾಗಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಜಿಲ್ಲಾ ಬೆಳೆಗಾರರ ಸಂಘ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳೆÉಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ, ನೆರಳು ರಹಿತ ಕಾಫಿ ಕೃಷಿಯನ್ನು ತೀವ್ರವಾಗಿ ವಿರೋಧಿಸುವದಾಗಿ ತಿಳಿಸಿದರು. ಭಾರತದ ಕಾಫಿ ಕೃಷಿ ಪರಿಸರ ಸ್ನೇಹಿಯಾಗಿದ್ದು, ಕಾಫಿ ತೋಟಗಳು ಜೀವ ವೈವಿಧ್ಯತೆಗಳ ತಾಣವಾಗಿದೆ. ಈ ಹಿಂದಿನಿಂದಲೂ ಪ್ರಕೃತಿಯ ನೈಜತೆಯನ್ನು ಕಾಪಾಡಿಕೊಂಡು ಕಾಫಿ ಕೃಷಿ ಮಾಡುವ ಮೂಲಕ ಆರ್ಥಿಕ ಲಾಭ ಹೊಂದುವದರೊಂದಿಗೆ ಪ್ರಕೃತಿಯನ್ನು ಉಳಿಸಿ ಬೆಳೆಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದುರಾಸೆಗೆ ಒಳಗಾಗಿರುವ ಕೆಲವು ಬೆಳೆಗಾರರು ಮರಗಳನ್ನು ಕಡಿದು ಕಾಫಿ ತೋಟಗಳನ್ನು ನೆರಳು ರಹಿತಗೊಳಿಸುತ್ತಿದ್ದಾರೆ. ಈ ಬೆಳವಣಿಗೆಯಿಂದ ಪ್ರಾಕೃತಿಕ ಅಸಮತೋಲನ ಉಂಟಾಗುವದಲ್ಲದೆ, ಕಾಂಡಕೊರಕದ ಹಾವಳಿ, ಬೆರ್ರಿ ಬೋರರ್ ಸೇರಿದಂತೆ ಇನ್ನಿತರ ಸಮಸ್ಯೆಗಳು ಹೆಚ್ಚಾಗಲಿದೆ. ಅಲ್ಲದೆ, ಜೀವ ವೈವಿಧ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ನಂದಾ ಬೆಳ್ಯಪ್ಪ ಆತಂಕ ವ್ಯಕ್ತಪಡಿಸಿದರು.

ಈ ಬೆಳವಣಿಗೆ ಬಗ್ಗೆ ಕಾಫಿ ಮಂಡಳಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಒತ್ತಾಯಿಸಿದ ಅವರು, ಒಕ್ಕೂಟದ ವತಿಯಿಂದಲೂ ಇದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವದೆಂದು ಸ್ಪಷ್ಟಪಡಿಸಿದರು. ಕಾಫಿ ತೋಟಗಳಲ್ಲಿ ಮರಗಳನ್ನು ಬೆಳೆಸುವದರಿಂದ ಪರಿಸರಕ್ಕೆ ವರದಾನವಾಗುವದಲ್ಲದೆ, ಕರಿಮೆಣಸಿನ ಫಸಲಿನಿಂದಲೂ ಲಾಭ ಗಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಇರುವ ಬೆಲೆಗೂ ಸ್ಥಳೀಯ ಕಾಫಿ ಖರೀದಿದಾರರು ಬೆಳೆಗಾರರಿಗೆ ನೀಡುತ್ತಿರುವ ಬೆಲೆಗೂ ಸಾಕಷ್ಟು ವ್ಯತ್ಯಾಸಗಳಿದ್ದು, ಬೆಳೆಗಾರರು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ನಂದಾ ಬೆಳ್ಯಪ್ಪ ಆರೋಪಿಸಿದರು. ವ್ಯಾಪಾರಸ್ಥರು ಬೆಳೆಗಾರರಿಂದ ನ್ಯಾಯಯುತ ಬೆಲೆ ನೀಡಿ ಕಾಫಿ ಖರೀದಿಸಬೇಕೆಂದು ಒಕ್ಕೂಟದ ಮೂಲಕ ಒತ್ತಾಯಿಸುವದಾಗಿ ಅವರು ಇದೇ ಸಂದರ್ಭ ತಿಳಿಸಿದರು.

ಕಾಫಿ ತೋಟಗಳನ್ನು ಕಾಡುತ್ತಿರುವ ಕಾಡಾನೆ ಹಾವಳಿ ಕುರಿತು ಮಾತನಾಡಿದ ಒಕ್ಕೂಟದ ಸಂಚಾಲಕ ಕೆ.ಕೆ.ವಿಶ್ವನಾಥ್, ಕಾಡಾನೆ ಧಾಳಿ ಸಂದರ್ಭ ಕೃಷಿ ಫಸಲಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ದ್ವಿಗುಣಗೊಳಿಸಿದೆ. ಇದು ಸ್ವಾಗತಾರ್ಹವಾಗಿದ್ದರೂ ಕಾಫಿ ಬೆಳೆಗಾರರಿಗೆ ಮಾತ್ರ ಒಂದು ಕಾಫಿ ಗಿಡಕ್ಕೆ 100 ರೂ.ನಿಂದ 200 ರೂ.ಗೆ ಏರಿಕೆ ಮಾಡಿ ಅಲ್ಪ ಮೊತ್ತದ ಪರಿಹಾರ ಘೋಷಿಸಿದೆ. ಇದು ಅತ್ಯಂತ ಕಡಿಮೆ ಮೊತ್ತವಾಗಿದೆಯೆಂದು ಅಭಿಪ್ರಾಯಪಟ್ಟ ಅವರು, ಕಾಡಾನೆ ಹಾವಳಿ ತಡೆಗೆ ಸರ್ಕಾರ ಶಾಶ್ವತ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಚಿಂತನೆ ನಡೆಸಿರುವ ನೂತನ ಕಾಫಿ ಕಾಯ್ದೆಗೆ ಈಗಾಗಲೆ ಒಕ್ಕೂಟದ ಮೂಲಕ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಕಾಫಿ ದಿನ ಆಚರಣೆ

ಬೆಳೆÉಗಾರರ ಸಂಘದ ಅಧ್ಯಕ್ಷ ನಂದಿನೆರವಂಡ ದಿನೇಶ್ ಮಾತನಾಡಿ ಮಡಿಕೇರಿಯ ಹೆಸರುವಾಸಿ ಪ್ರವಾಸಿತಾಣ

(ಮೊದಲ ಪುಟದಿಂದ) ರಾಜಾಸೀಟಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದೊಂದಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕೊಡಗು ಜಿಲ್ಲಾ ಬೆಳೆಗಾರರ ಸಂಘದ ವತಿಯಿಂದ ಅ.1 ರಂದು ಮಧ್ಯಾಹ್ನ 3 ಗಂಟೆಗೆ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ನಡೆಯಲಿದೆ ಎಂದರು. ಕಾಫಿ ಸೇವನೆ, ಅದರ ಪ್ರಯೋಜನ ಮತ್ತು ಕಾಫಿ ತಯಾರಿಸುವ ವಿಧಾನದ ಕುರಿತು ರಾಜಾಸೀಟಿಗೆ ಆಗಮಿಸುವ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುವದು.

ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಕರುಂಬಯ್ಯ, ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸದಸ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಶಿವಶಂಕರ್ ಹಾಗೂ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಹೇಂದ್ರ ಇದ್ದರು.