ಸೋಮವಾರಪೇಟೆ,ನ.11: ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಬ್ಯಾಂಕ್ಗಳು ಮತ್ತು ಅಂಚೆ ಕಚೇರಿಯ ಮುಂದೆ ಹಣ ಬದಲಾವಣೆಗಾಗಿ ಸಾರ್ವಜನಿಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಪರದಾಡಿದರು. ಕೆಲವೊಂದು ಬ್ಯಾಂಕ್ಗಳಲ್ಲಿ ಹಣ ಪಡೆಯಲು ನೂಕುನುಗ್ಗಲು ಉಂಟಾಯಿತು.
ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ತಾ.10 ರಂದು ಕೊಡಗು ಜಿಲ್ಲಾ ಬಂದ್ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದಲ್ಲಿ ಎಸ್ಬಿಐ ಹೊರತುಪಡಿಸಿ ಎಲ್ಲಾ ವಾಣಿಜ್ಯ ಬ್ಯಾಂಕ್ಗಳು ಮುಚ್ಚಿದ್ದವು.
ಹಣ ಬದಲಾವಣೆಗಾಗಿ ಬೆಳಿಗ್ಗೆಯೇ ನೂರಾರು ಮಂದಿ, ಬ್ಯಾಂಕ್ ಹಾಗೂ ಎಟಿಎಂ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. 10ಗಂಟೆಯ ನಂತರ ಗ್ರಾಮೀಣ ಭಾಗದಿಂದಲೂ ಜನರು ಬಂದು ಸರತಿ ಸಾಲಿಗೆ ಸೇರಿಕೊಂಡರು.
ಅಂಚೆ ಕಚೇರಿಯಲ್ಲಿ ಬೇಗನೆ ಹಣ ಖಾಲಿಯಾಯಿತು. ಎಟಿಎಂಗಳಲ್ಲಿ ಅರ್ಧ ಗಂಟೆಯಲ್ಲೇ ಹಣ ಇಲ್ಲದಂತಾಗಿ ಜನರು ನಿರಾಶೆಗೊಂಡರು. ಬಹುತೇಕ ಬ್ಯಾಂಕ್ಗಳ ಎಟಿಎಂಗೆ ಸಿಬ್ಬಂದಿಗಳು ಬೀಗ ಜಡಿದರು. ವಿಜಯ ಬ್ಯಾಂಕ್ನಲ್ಲಿ ಮಾತ್ರ ಗ್ರಾಹಕರಿಗೆ ಎಟಿಎಂ ಸೌಲಭ್ಯವಿತ್ತು. ಎರಡು ಸಾವಿರ ರೂ.ಗಳನ್ನು ಮಾತ್ರ ಪಡೆಯುವ ಅವಕಾಶವಿದ್ದ ಕಾರಣ ಗ್ರಾಹಕರು ಮುಗಿಬಿದ್ದು ಹಣ ಪಡೆದುಕೊಂಡರು.