ಶ್ರೀಮಂಗಲ, ಆ. 24: ಕೇಂದ್ರ ಸರಕಾರ ನೂತನವಾಗಿ ಕಾಫಿ ಕಾಯ್ದೆ 2016 ಜಾರಿಗೆ ತರುವ ಮೊದಲು ಅದರ ಸಾಧಕ ಬಾಧಕಗಳನ್ನು ಕಾಫಿ ಬೆಳೆಗಾರರು ಹಾಗೂ ಕಾಫಿ ಬೆಳೆಗಾರರನ್ನು ಪ್ರತಿನಿಧಿಸುವ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆಯಬೇಕು. ಕಾಯ್ದೆಯು ಬೆಳೆಗಾರರನ್ನು ಕತ್ತಲೆಯಲ್ಲಿಟ್ಟು ಜಾರಿಯಾಗದೆ ಜಾರಿಗೆ ಮುನ್ನ ಪಾರದರ್ಶಕತೆಯಿಂದ ಕೂಡಿರಬೇಕು. ಈ ಬಗ್ಗೆ ಸದ್ಯದಲ್ಲೇ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡಿ ಸಮಾಲೋಚಿಸಿ ಸರಕಾರದ ಗಮನ ಸೆಳೆಯಲು ಜಿಲ್ಲಾ ಬೆಳೆಗಾರರ ಒಕ್ಕೂಟ ನಿರ್ಧರಿಸಿದೆ.
ಶ್ರೀಮಂಗಲ ಪ್ರವಾಸಿ ಮಂದಿರದಲ್ಲಿ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
12ನೇ ಪಂಚವಾರ್ಷಿಕ ಯೋಜನೆ ಮೂಲಕ ಕಾಫಿ ಅಭಿವೃದ್ಧಿಗೆ
950 ಕೋಟಿ ಅನುದಾನವನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ. ಆದರೆ ಕಳೆದ 8 ತಿಂಗಳಿನಿಂದ ಬೆಳೆಗಾರರ ಸಹಾಯಧನ ಅರ್ಜಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಕಾಫಿ ಕಣ, ಗೋದಾಮು, ಯಾಂತ್ರೀಕರಣ ಸಾಮಗ್ರಿಗಳು, ನೀರಾವರಿ ಪಂಪ್ ಸೆಟ್, ಕೆರೆ ಇತ್ಯಾದಿ ಕೆಲಸಗಳನ್ನು ಮಾಡಿರುವ ಬೆಳೆಗಾರರಿಗೆ ಇದುವರೆಗೆ ಕಾಫಿ ಮಂಡಳಿ ಮೂಲಕ ದೊರೆಯುತ್ತಿದ್ದ ಸಹಾಯಧನಗಳು ತಡೆಹಿಡಿಯಲ್ಪಟ್ಟಿವೆ. ಕೂಡಲೇ ಕೇಂದ್ರ ಸರ್ಕಾರ ಕಾಫಿ ಮಂಡಳಿಗಳಿಗೆ 12ನೇ ಪಂಚವಾರ್ಷಿಕ ಯೋಜನೆಯ ಅನುದಾನವನ್ನು ಬಿಡುಗಡೆ ಮಾಡಿ ಸಹಾಯಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲು ನಿರ್ಧರಿಸಲಾಗಿದೆ.
ಪ್ರಸಕ್ತ ವರ್ಷ ಬೇಸಿಗೆಯಲ್ಲಿ ಮಳೆಯ ಅಭಾವದಿಂದ ಜಿಲ್ಲಾದ್ಯಂತ ಕಾಫಿ ಹಾಗೂ ಕರಿಮೆಣಸು ಫಸಲುಗಳಿಗೆ ಹಾನಿಯಾಗಿದೆ. ಅದಲ್ಲದೆ ಮಳೆಗಾಲದಲ್ಲಿಯೂ ಜಿಲ್ಲೆಯ ಬಹುತೇಕ ಕಡೆ ಸಾಮಾನ್ಯ ಮಳೆಯಾಗದೆ ಮುಖ್ಯವಾಗಿ ಕರಿಮೆಣಸು ಫಸಲು ಶೇ 80-90 ಕುಂಠಿತಗೊಂಡಿದೆ. ಬೇಸಿಗೆಯಲ್ಲಿ ಬರಗಾಲಕ್ಕೆ ತುತ್ತಾಗಿ ಕರಿಮೆಣಸು ಬಳ್ಳಿಗಳು ಬಳಲಿವೆ. ಇದರಿಂದ ಸೂಕ್ತ ಸಮಯದಲ್ಲಿ ಕರಿಮೆಣಸು ಸರಗಳು ಮೂಡಿಲ್ಲ. ಈ ಬಾರಿ ಉತ್ತಮ ಕರಿಮೆಣಸು ಫಸಲು ನಿರೀಕ್ಷಿಸಿದ್ದರೂ ಫಸಲು ವೈಫಲ್ಯ ಕಂಡಿದೆ. ಕರಿಮೆಣಸಿಗೆ ಉತ್ತಮ ಧಾರಣೆ ಬಂದಿದ್ದರೂ ಕಳೆದ ವರ್ಷ ಸೇರಿದಂತೆ ಸತತ 2ನೇ ವರ್ಷವೂ ಫಸಲು ಕುಂಠಿತಗೊಂಡು ಬೆಳೆಗಾರರಲ್ಲಿ ನಿರಾಶೆ ಮೂಡಿಸಿದೆ. ಈಗಾಗಲೇ ಬೇಸಿಗೆಯಲ್ಲಿ ಕಾಫಿ ಹೂಮಳೆಗೆ ಮಳೆ ಆಶ್ರಯಿತ ತೋಟಗಳಲ್ಲಿ ಮಳೆಯಿಲ್ಲದೆ ಫಸಲು ನಾಶವಾಗಿದೆ. ಕೃತಕ ನೀರಾವರಿ ಸೌಲಭ್ಯ ನೀಡಿದಂತಹ ಕಾಫಿ ಬೆಳೆಗಾರರಿಗೆ ಮಾತ್ರ ಸ್ವಲ್ಪ ಮಟ್ಟಿಗೆ ಫಸಲು ಇದೆ. ಜಿಲ್ಲೆಯ ಬೆಳೆಗಾರರ ಸಮಸ್ಯೆಗೆ ಸರಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ಕಾಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ನಿರ್ದೇಶಕ ಕೈಬುಲೀರ ಹರೀಶ್, ಶ್ರೀಮಂಗಲ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್, ಪ್ರಮುಖರಾದ ಅಜ್ಜಮಾಡ ಎಂ. ಅಯ್ಯಣ್ಣ, ಅಯ್ಯಮಾಡ ಸೋಮೇಶ್, ಕಾರ್ಯಪ್ಪ, ಮಚ್ಚಮಾಡ ರಂಜಿ, ಬೋಡಂಗಡ ಕಾರ್ಯಪ್ಪ ಮತ್ತಿತರರು ಹಾಜರಿದ್ದರು.