ಮಡಿಕೇರಿ, ಡಿ. 14: ಕೊಡಗು ಜಿಲ್ಲೆಯಲ್ಲಿರುವ ಕಾರ್ಮಿಕರು, ದೀನ ದಲಿತರು, ಕಡು ಬಡವರು ಹಾಗೂ ಹಿಂದುಳಿದ ವರ್ಗದವರಿಗೆ ಸರಕಾರ ನಿವೇಶನ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ವನ್ನು ತೀವ್ರಗೊಳಿಸಿ ಕೊಡಗು ಬಂದ್‍ಗೆ ಕರೆ ನೀಡಬೇಕಾಗುತ್ತದೆ ಎಂದು ಎಐಟಿಯುಸಿ ಸಂಘಟನೆ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಹೆಚ್.ಎಂ. ಸೋಮಪ್ಪ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ನಿವೇಶನ ರಹಿತ ಕಾರ್ಮಿಕರು, ದೀನ ದಲಿತರು, ಕಡುಬಡವರು ಹಾಗೂ ಹಿಂದುಳಿದ ವರ್ಗದವರು ಜಿಲ್ಲೆಯಲ್ಲಿದ್ದಾರೆ ಎಂದರು. ಸಂಘಟನೆ 2002ರಿಂದಲೂ ಹೋರಾಟ ನಡೆಸುತ್ತಾ ಬಂದಿದ್ದರೂ, ನಿವೇಶನ ವಿತರಿಸುವಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಎಐಟಿಯುಸಿ ಸಂಘಟನೆ ನಿರಂತರ ಹೋರಾಟ ನಡೆಸಿದ ಸಂದರ್ಭ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂ ರಾವ್ ಅವರುಗಳು, ಜಿಲ್ಲೆಯ ಎಲ್ಲಾ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ 10 ಎಕರೆಗಿಂತ ಅಧಿಕ ಸರಕಾರಿ ಜಮೀನು ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ವಿತರಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಈ ಸಂಬಂಧವಾಗಿ ಎಲ್ಲಾ ಪಂಚಾಯತ್‍ಗಳಿಗೆ ಸೂಚನೆ ನೀಡಿದ್ದರೂ, ಅಂತಹ ಒತ್ತುವರಿ ತೆರವು ಕಾರ್ಯ ಮಾತ್ರ ಇದುವರೆಗೂ ನಡೆದಿಲ್ಲ ಎಂದು ಸೋಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಬಹುತೇಕ ಕಾರ್ಮಿಕ ವರ್ಗದವರು ತೋಟಗಳ ಲೈನ್‍ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಅವರು ನಿವೃತ್ತರಾದ ಬಳಿಕ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಜಿಲ್ಲೆಯ ಶಾಸಕರುಗಳಾಗಲಿ, ಸಂಸದರಾಗಲಿ ಈ ಬಗ್ಗೆ ಸದನಗಳಲ್ಲಿ ಸರಕಾರದ ಗಮನಸೆಳೆಯುತ್ತಿಲ್ಲ. ಕೇವಲ ಕಾರ್ಮಿಕರನ್ನು ಓಟ್ ಬ್ಯಾಂಕ್ ಮಾಡಿಕೊಂಡಿರುವ ವಿವಿಧ ರಾಜಕೀಯ ಪಕ್ಷಗಳು, ತಾವು ಅಧಿಕಾರದ ಗದ್ದುಗೆ ಏರಿದ ಬಳಿಕ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದಾಪುರ ಸಮೀಪದ ದಿಡ್ಡಳ್ಳಿಯಲ್ಲಿ ಸುಮಾರು 500ಕ್ಕೂ ಅಧಿಕ ನಿವೇಶನ ರಹಿತ ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದು, ಅವರಿಗೆ ಯಾವದೇ ಮುನ್ಸೂಚನೆ ನೀಡದೆ, ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸದೆ ತೆರವುಗೊಳಿಸಲಾಗಿದೆ. ಇದೀಗ ಅವರುಗಳು ಬೀದಿ ಪಾಲಾಗಿದ್ದು, ನಿವೇಶನಕ್ಕಾಗಿ ನಿರಾಶ್ರಿತರು ನಡೆಸುವ ಎಲ್ಲಾ ಹೋರಾಟಗಳಿಗೆ ಸಂಘಟನೆ ಬೆಂಬಲ ನೀಡಲಿದೆ ಎಂದು ಸೋಮಪ್ಪ ತಿಳಿಸಿದರು.

ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕಾರ್ಮಿಕರು ಡಿ.17ರಂದು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಲಿದ್ದಾರೆ. ಇದಕ್ಕೆ ಸ್ಪಂದನ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು. ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಗು ಬಂದ್ ನಡೆಸುವದಕ್ಕೂ ಹಿಂಜರಿಯುವದಿಲ್ಲ ಎಂದು ಅವರು ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕ್ರಮ ಸ್ವಾಗತಾರ್ಹ. ಆದರೆ ಪೂರ್ವ ತಯಾರಿ ಇಲ್ಲದೆ ಅವರು ಈ ಕ್ರಮಕೈಗೊಂಡಿರು ವದರಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ತೋಟ ಕಾರ್ಮಿಕರು ತಮ್ಮ ವಾರದ ದುಡಿಮೆಯ ಹಣವನ್ನು ಪಡೆಯಲು ಒಂದು ದಿನ ಕೆಲಸಕ್ಕೆ ರಜೆ ಹಾಕಿ ಬ್ಯಾಂಕ್‍ನಲ್ಲಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ 500 ಹಾಗೂ 1000 ಮುಖಬೆಲೆಯ ಹೊಸ ನೋಟುಗಳನ್ನು ಬ್ಯಾಂಕ್‍ಗಳಿಗೆ ಸರಬರಾಜು ಮಾಡುವಂತಾಗಬೇಕು ಎಂದು ಸೋಮಪ್ಪ ಹೇಳಿದರು.

ಜನ್‍ಧನ್ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವದಾಗಿ ಅವರು ನೀಡಿರುವ ಹೇಳಿಕೆ ಹಾಗೂ ಬೇನಾಮಿ ಆಸ್ತಿ ಹೊಂದಿರುವವರ ಆಸ್ತಿ ಮುಟ್ಟುಗೋಲು ಹಾಕಲಿರುವ ನಿರ್ಧಾರವೂ ಸ್ವಾಗತಾರ್ಹವಾಗಿದೆ. ಆದರೆ ಅಂತಹ ಆಸ್ತಿಗಳನ್ನು ನಿವೇಶನ ರಹಿತರಿಗೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ವೀರಾಜಪೇಟೆ ಹೋಬಳಿ ಅಧ್ಯಕ್ಷ ಹೆಚ್. ಆನಂದ ಅವರು ಮಾತನಾಡಿ, ಹಾತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರುವ ಕಾರ್ಮಿಕ ವರ್ಗದವರಿಗೆ ನಿವೇಶನ ಹಂಚುವಂತೆ ಸಂಘಟನೆ ವತಿಯಿಂದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಆದರೆ ಇದೀಗ ಪಂಚಾಯತ್ ವ್ಯಾಪ್ತಿಯ ಮೂಲ ನಿವಾಸಿಗಳಿಗೆ ಮಾತ್ರ ನಿವೇಶನ ಹಂಚಿಕೆಯಲ್ಲಿ ಆದ್ಯತೆ ನೀಡುವದಾಗಿ ಪಂಚಾಯತ್ ಆಡಳಿತ ಮಂಡಳಿ ಹೇಳುತ್ತಿದೆ. ಹಲವು ದಶಕಗಳಿಂದ ಪಂಚಾಯತ್ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಇತರರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಹೆಚ್.ಎ.ನಾರಾಯಣ ಮಾತನಾಡಿ, ತೋಟ ಕಾರ್ಮಿಕರು ವಿವಿಧ ತೋಟಗಳ ಲೈನ್ ಮನೆಗಳಲ್ಲಿ ವಾಸವಿದ್ದು, 58 ವರ್ಷಗಳಾದ ಬಳಿಕ ಅವರು ನಿವೃತ್ತರಾಗುತ್ತಾರೆ. ಈ ರೀತಿ ನಿವೃತ್ತರಾಗುವವರಿಗೆ ಸರಕಾರ ನಿವೇಶನ ಒದಗಿಸದಿದ್ದಲ್ಲಿ ಅವರುಗಳು ಎಲ್ಲಿಗೆ ಹೋಗಲು ಸಾಧ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸೋಮವಾರಪೇಟೆ ಹೋಬಳಿ ಅಧ್ಯಕ್ಷ ಪಿ.ಟಿ.ಸುಂದರ, ಎಂ.ಎಸ್.ಶಿವಪ್ಪ ಹಾಗೂ ವೀರಾಜಪೇಟೆಯ ಮಹೇಶ್ ಹಾಜರಿದ್ದರು.