ಸೋಮವಾರಪೇಟೆ,ಅ.24: ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಹಾಗೂ ಹಕ್ಕುಪತ್ರಗಳನ್ನು ವಿತರಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್ ಅವರ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಧರಣಿ ನಡೆಸಿ, ನಿವೇಶನ ಹಕ್ಕುಪತ್ರ ಹಾಗು ಕೃಷಿ ಭೂಮಿ ಹಕ್ಕು ಪತ್ರಕ್ಕಾಗಿ ಕಂದಾಯ ಇಲಾಖೆಗೆ ನೀಡಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಲಾಯಿತು. ಕಂದಾಯ ಇಲಾಖೆ ಅಧಿಕಾರಿ ಗಳಿಗೆ ಲಂಚ ನೀಡದ ಹಿನ್ನೆಲೆಯಲ್ಲಿ ಸಾವಿರಾರು ಅರ್ಜಿಗಳು ಕಡತಗಳಲ್ಲೇ ಕೊಳೆಯುತ್ತಿವೆ. ಪ್ರಭಾವಿ ಜನಪ್ರತಿನಿಧಿ ಗಳ ಸಂಬಂಧಿಕರು, ಹಣವಿದ್ದವರ ಅರ್ಜಿಗಳು ದಿನ ಬೆಳಗಾಗುವ ದರೊಳಗೆ ವಿಲೇವಾರಿ ಯಾಗುತ್ತವೆ. ಹಣವಿದ್ದವರಿಗೆ ಮಾತ್ರ ಹಕ್ಕುಪತ್ರ ನೀಡುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ್ ಆರೋಪಿಸಿದರು.
ಫಾರಂ ನಂ.50 ಮತ್ತು 53 ಅರ್ಜಿಗಳ ವಿಲೇವಾರಿಗೆ 10ರಿಂದ 15 ಸಾವಿರ ರೂ. ಲಂಚ ನೀಡಬೇಕಾಗಿದೆ. ಶನಿವಾರಸಂತೆ, ಕುಶಾಲನಗರ ನಾಡ ಕಚೇರಿಗಳು ಲಂಚದ ಅಡ್ಡೆಗಳಾಗಿವೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ನಿರ್ವಾಣಪ್ಪ ಆರೋಪಿಸಿದರು. 94 ಸಿ. ರಡಿ ಮೂರುಮುಕ್ಕಾಲು ಸೆಂಟ್ ಜಾಗದ ಹಕ್ಕುಪತ್ರಕ್ಕೂ 2 ಸಾವಿರದಿಂದ 3 ಸಾವಿರ ರೂ. ಲಂಚ ಕೇಳುವ ಮಟ್ಟಕ್ಕೆ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೆಳೆದಿದ್ದಾರೆ ಎಂದು ದೂರಿದರು.
ತಾಲೂಕಿನ ಕಣಿವೆ, ರಾಂಪುರ, ಗುಡ್ಡೆಹೊಸೂರು, ಬಸವನಹಳ್ಳಿ, ಕುಶಾಲನಗರ ಗುಂಡೂರಾವ್ ಬಡಾವಣೆ, ಕುಶಾಲನಗರ 3ನೇ ಬ್ಲಾಕ್‍ನಲ್ಲಿ ಹಲವಾರು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡವರಿಗೆ ಇದುವರಗೆ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿದ ಅವರು, ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಭೂಮಾಲೀಕರ ಅಕ್ರಮ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ, ಭೂಹೀನ ಕೃಷಿ ಕಾರ್ಮಿಕರಿಗೆ ತಲಾ 3 ಎಕರೆಯಂತೆ ಹಂಚಬೇಕು. ಭೂಮಿ ಹಂಚಿಕೆ ಮತ್ತು ನಿವೇಶನ ಹಂಚಿಕೆಗೆ ಹೊಸ ಅರ್ಜಿಯನ್ನು ಕರೆಯಬೇಕು. ಲಂಚಕೋರ ಅಧಿಕಾರಿಗಳ ಮೇಲೆ ಮೇಲಧಿಕಾರಿ ಗಳು ನಿಗಾ ವಹಿಸಬೇಕು. ಇತ್ಯಾದಿ ಬೇಡಿಕೆಯುಳ್ಳ ಮನವಿ ಪತ್ರವನ್ನು ಇಲ್ಲಿನ ತಹಶೀಲ್ದಾರರಾದ ಕೃಷ್ಣ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹೆಚ್.ಇ. ಸಣ್ಣಪ್ಪ, ಹೆಚ್.ಎಂ. ಸೋಮಪ್ಪ, ಕಾಂತ, ಮೇರಿ, ಪೌಸಿಯಾ ಸೇರಿದಂತೆ ಇತರರು ಭಾಗವಹಿಸಿದ್ದರು.