ಕುಶಾಲನಗರ, ಆ. 26: ರಾಜ್ಯದ ಮೂಲ ಆದಿವಾಸಿ ಸಮುದಾಯಗಳು ಸರಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಪಡುವ ಮೂಲಕ ಸಮರ್ಪಕ ಮೂಲಭೂತ ಸೌಕರ್ಯಗಳು ಸೇರಿದಂತೆ ಇತರೆ ಸ್ಥಾನಮಾನಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಜೆ.ಕೆ. ಗೋಪಾಲ ಹೇಳಿದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರಕಿ 6 ದಶಕಗಳು ಕಳೆದರೂ ಆದಿವಾಸಿಗಳು ಅತಂತ್ರ ಸ್ಥಿತಿಯಲ್ಲಿ ದ್ದಾರೆ. ಸರಕಾರಗಳ ನಿರ್ಲಕ್ಷ್ಯ ದಿಂದಾಗಿ ಆದಿವಾಸಿಗಳು ಅತ್ಯಂತ ನಿಕೃಷ್ಠವಾಗಿ ಜೀವನ ನಡೆಸು ವಂತಾಗಿದೆ. ಜನಾಂಗದವರನ್ನು ಜೀತಕ್ಕೆ ದುಡಿಸಿಕೊಳ್ಳುವ ಪದ್ಧತಿ ಇನ್ನೂ ಮುಂದುವರೆದಿರುವದು ವಿಷಾದನೀಯ ಎಂದ ಅವರು, ನಿರಾಶ್ರಿತರಾಗಿ ರಾಜ್ಯಕ್ಕೆ ಆಗಮಿಸಿದ ಟಿಬೇಟ್ ಜನಾಂಗಕ್ಕೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ತೋರಿರುವ ಕಾಳಜಿಯನ್ನು ವನ್ಯ ಸಂಪತ್ತನ್ನು ರಕ್ಷಿಸಿಕೊಂಡು ಬರುತ್ತಿರುವಂತಹ ಆದಿವಾಸಿಗಳಿಗೆ ಒದಗಿಸುವಲ್ಲಿ ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಆದಿವಾಸಿ ಜನಾಂಗಗಳಿಗೆ ರಾಜಕೀಯವಾಗಿ ದೊರಕಬೇಕಾದ ಮೀಸಲಾತಿಗಳು ಮರೀಚಿಕೆಯಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕು ಪತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಜನಾಂಗದ ವಿದ್ಯಾವಂತರಿಗೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ ಎಂದ ಗೋಪಾಲ ಅವರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯಯೋಜನೆ ರೂಪಿಸಬೇಕಿದೆ ಎಂದು ಒತ್ತಾಯಿಸಿದರು.
ಕಳಪೆ ಪೌಷ್ಟಿಕ ಆಹಾರ ಧಾನ್ಯಗಳು ವಿತರಣೆಯಾಗುತ್ತಿದ್ದು ಇದರಿಂದ ಅನಾರೋಗ್ಯ ಸಮಸ್ಯೆ ಕೂಡ ಉಲ್ಭಣಿಸುತ್ತಿದೆ. ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಆದಿವಾಸಿಗಳ ಸಂಖ್ಯೆ ಅಧಿಕವಾಗಿರುವ ಕಾರಣ ಶಾಸಕ ಸ್ಥಾನಕ್ಕೆ ಆದಿವಾಸಿ ಜನಾಂಗದವರಿಗೆ ರಾಜಕೀಯ ಮೀಸಲಾತಿ ಒದಗಿಸಬೇಕೆಂದು ಅವರು ಈ ಸಂದರ್ಭ ಆಗ್ರಹಿಸಿದರು.
ಕೊಡಗು ಜಿಲ್ಲಾಧ್ಯಕ್ಷ ಜೆ.ಕೆ. ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿರುವ ಆದಿವಾಸಿಗಳ ಜನಸಂಖ್ಯೆ ಬಗ್ಗೆ ಸಮರ್ಪಕವಾದ ಮಾಹಿತಿಯಿಲ್ಲ. ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಜನಾಂಗ ಬಾಂಧವರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿರುವ ಪರಿಣಾಮ ಅವರಿಗೆ ಲಭಿಸಬೇಕಾದ ಅಗತ್ಯ ದಾಖಲಾತಿ ಪತ್ರಗಳು ಮತ್ತು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಜನಾಂಗದ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿಗಳು ಕೇವಲ ನಾಮಕಾವಸ್ಥೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗಿರಿಜನ ಕಲ್ಯಾಣ ಅಧಿಕಾರಿ ಸತೀಶ್ ಅವರನ್ನು ವರ್ಗಾವಣೆ ಗೊಳಿಸಲಾಗಿದ್ದು ಅವರನ್ನು ಮರಳಿ ಜಿಲ್ಲೆಗೆ ನಿಯೋಜಿಸಬೇಕೆಂದು ಅವರು ಒತ್ತಾಯಿಸಿದರು. ಕೂಡಲೆ ಜಿಲ್ಲೆಯ ಶಾಸಕರು ಈ ಬಗ್ಗೆ ಗಮನಹರಿಸಿ ಸಮಸ್ಯೆಗೆ ಪರಿಹಾರ ದೊರಕಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಅವರು ಎಚ್ಚರಿಸಿದÀರು.
ಗೋಷ್ಠಿಯಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಜಡೆಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಸಿ. ಸುಲೋಚನಾ ಮೈಸೂರು ನಗರ ಕಾರ್ಯದರ್ಶಿ ಎಸ್. ಬಸವಯ್ಯ, ಮೈಸೂರು ಗ್ರಾಮಾಂತರ ಅಧ್ಯಕ್ಷ ಜೆ.ಟಿ. ರಾಜಪ್ಪ, ಮೇದ ಜನಾಂಗದ ಮೈಸೂರು ನಗರಾಧ್ಯಕ್ಷ ಲಿಂಗಶೆಟ್ಟಿ ಇದ್ದರು.