ವೀರಾಜಪೇಟೆ, ಜು. 4: ಕಳೆದ ಎರಡು ತಿಂಗಳ ಅವಧಿಯಲ್ಲಿ ಅಮ್ಮತ್ತಿ ಬಳಿಯ ಕಣ್ಣಂಗಾಲ, ಒಂಟಿ ಅಂಗಡಿ, ಪಚ್ಚಾಟ್, ಹಚ್ಚಿನಾಡು, ಎಡಿಯೂರು, ಬೈರಂಬಾಡ ಸುತ್ತಮುತ್ತಲಿನ ಗ್ರಾಮಗಳಿಗೆ ಆಗಿಂದಾಗ್ಗೆ ವಿದ್ಯುತ್ ಕಡಿತಗೊಳಿಸುತ್ತಿರುವ ವಿರುದ್ಧ ವಿವಿಧ ಗ್ರಾಮಸ್ಥರುಗಳು ಸೇರಿ ಅಮ್ಮತ್ತಿ ಚೆಸ್ಕಾಂ ಉಪ ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಹಾಗೂ ಅಮ್ಮತ್ತಿ ಒಂಟಿಅಂಗಡಿ ಕೊಡವ ಅಸೋಸಿಯೇಶನ್ ವತಿಯಿಂದ ಇಂದು ಅಪರಾಹ್ನ ಅಮ್ಮತ್ತಿ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಯಲ್ಲಿದ್ದ ಜೂನಿಯರ್ ಇಂಜಿನಿಯರ್ ರಮೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವಿಭಾಗದ ಲೈನ್‍ಮನ್ ಮಹೇಶ್ ಎಂಬವರು ಚೆಸ್ಕಾಂನ ಖಾಯಂ ಲೈನ್‍ಮನ್ ಸೇವೆಯಲ್ಲಿದ್ದರೂ ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಯಾವದೇ ಕೆಲಸವಾಗಬೇಕಾದರೂ ಗ್ರಾಹಕರು ಹಣ ನೀಡಬೇಕು. ವಿದ್ಯುತ್ ಮೀಟರ್ ಸ್ಥಳಾಂತರಕ್ಕೆ ಎಡಿಯೂರು ಗ್ರಾಮದ ಕೊಳುವಂಡ ಸುಬ್ಬಯ್ಯ ಅವರಿಂದ ಲಂಚ ಪಡೆದಿದ್ದಾನೆ. ಗ್ರಾಮಸ್ಥರಿಗೆ ವಿದ್ಯುತ್ ಸಮಸ್ಯೆ ಉಂಟಾದಾಗ ಮನೆ ಬಾಗಿಲಿಗೆ ಕಾರು ಕಳಿಸಿ ನಂತರ ಹಣ ಕೊಟ್ಟರೆ ಮಾತ್ರ ದುರಸ್ತಿ ಮಾಡಿಕೊಡಲಾಗುವದು ಎಂದು ಗದರಿಸುವದಾಗಿ ಗ್ರಾಮಸ್ಥರು ದೂರಿದರು. ಈ ವಿಭಾಗದ ಲೈನ್‍ಮನ್ ಮಹೇಶ್ ಹಾಗೂ ಬೋಜ ಎಂಬಿಬ್ಬರನ್ನು ತಕ್ಷಣ ಬದಲಾಯಿಸುವಂತೆ ಅಧಿಕಾರಿಯನ್ನು ಒತ್ತಾಯಿಸಿದರು.

ಗ್ರಾಮಸ್ಥರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಕಚೇರಿಗೆ ಬೀಗ ಜಡಿಯಲು ಸಿದ್ದರಿರುವದಾಗಿ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ವಿ.ಎನ್. ಮನೋಜ್ ಹೇಳಿದರು. ಲೈನ್‍ಮನ್‍ಗಳ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿತನ ದಿಂದಾಗಿ ಕಣ್ಣಂಗಾಲ ಗ್ರಾಮದ ಟೌನ್‍ನಲ್ಲಿ ಎರಡು ಬಾರಿ ತಲಾ 48 ವಿದ್ಯುತ್ ದೀಪಗಳು ಕೆಟ್ಟು ಹೋದುದರಿಂದ ಪಂಚಾಯಿತಿಗೆ ಸುಮಾರು ರೂ 48000 ನಷ್ಟ ಉಂಟಾಗಿರುವದಾಗಿ ಮನೋಜ್ ಆರೋಪಿಸಿದರು.

ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡ ಒಂದು ಗಂಟೆಯ ನಂತರ ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ಚೆಸ್ಕಾಂ ವಿಭಾಗದ ಸಹಾಯಕ ಅಭಿಯಂತರ ಕೆ.ಆರ್. ಸುರೇಶ್ ಗ್ರಾಮಸ್ಥರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿದರು. ಅಮ್ಮತ್ತಿ ಬಳಿಯ ಗ್ರಾಮಗಳಲ್ಲಿ ಅಗತ್ಯ ಇರುವೆಡೆಗಳಲ್ಲಿ ಲೈನ್‍ಮನ್‍ಗಳು ಖಾಯಂ ವಾಸ, ಅವಶ್ಯಕತೆ ಇರುವೆಡೆಗಳಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ದುರಸ್ತಿಗೊಳ ಗಾಗಿರುವ 11 ಕೆ.ವಿ. ವಿದ್ಯುತ್ ಸಂಪರ್ಕದ ತಂತಿಗಳನ್ನು ಸರಿಪಡಿಸಿ ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ಸಂಪರ್ಕ ಕೊಡಲಾಗುವದು ಎಂದು ಸುರೇಶ್ ಪ್ರತಿಭಟನಾಕಾರರಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಕೊಡವ ಅಸೋಸಿಯೇಷÀನ್ ಅಧ್ಯಕ್ಷ ಎಸ್.ಪಿ. ದೇವಯ್ಯ, ಬಿ. ಕಿರಣ್, ಎಸ್.ಪಿ. ದೇವಯ್ಯ, ಪೋರ್ಕಂಡ ಬೋಪಣ್ಣ, ಎಂ.ಎಸ್. ವಿಠಲ್ ಜಗ್ಗು ಬೆಳಿಯಪ್ಪ, ಡಿ.ಸಿ. ಮಂಜುನಾಥ್ ಮತ್ತಿತರರು ನೇತೃತ್ವ ವಹಿಸಿದ್ದರು. ಸುಮಾರು 150 ಮಂದಿಗೂ ಅಧಿಕ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.