ಸುಂಟಿಕೊಪ್ಪ, ನ.25: ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಟೆಂಪೊಟ್ರಾಕ್ಸ್ ತೂಫಾನ್ (ಕೆ 29 ಎ 8842) ವಾಹನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಗದ್ದೆಹಳ್ಳ ಗಾಂಧಿವೃತ್ತದ ತಿರುವಿನಲ್ಲಿ ಮಾರುತಿ ವ್ಯಾನ್‍ಗೆ ಡಿಕ್ಕಿಯಾಗಿ ಅನತಿ ದೂರದಲ್ಲಿಯೇ ನಿಂತಿದ್ದ ಬೈಕ್‍ಗೆ ಅಪ್ಪಳಿಸಿ ಅಂಗಡಿ ಮುಂದಿನ ಕಬ್ಬಿಣದ ಗೇಟಿಗೆ ಡಿಕ್ಕಿಯಾಗಿ ನಿಂತಿದ್ದು ಮುಂದೆ ಸಂಭವಿಸಬಹುದಾದ ಭಾರೀ ಪ್ರಾಣಹಾನಿ ತಪ್ಪಿದೆ.

ಈ ಅವಘಡ ಸಂಭವಿಸಿದ ಪಕ್ಕದಲ್ಲಿ ವಾಸದ ಮನೆಗಳು, ಅಂಗಡಿ ಹೊಟೇಲ್‍ಗಳು ಇದ್ದು ಅದೃಷ್ಟವಶಾತ್ ಇಲ್ಲಿನ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.

ಟೆಂಪೊಟ್ರಾಕ್ಸ್ ತೂಫಾನ್ ವಾಹನ ಚಾಲಕ ಈರಣ್ಣಮಡಿವಾಳ ಅವರಿಗೆ ರಾಷ್ಟ್ರೀಯ ಹೆದ್ದಾರಿ ಇಳಿಜಾರು ರಸ್ತೆಯಲ್ಲಿ ವಾಹನದ ನಿಯಂತ್ರಣ ತಪ್ಪಿದರಿಂದ ಗದ್ದೆಹಳ್ಳ ಗಾಂಧಿವೃತ್ತದ ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ ಓಮ್ನಿವ್ಯಾನ್ (ಕೆಎ.12.ಎನ್.5170)ಕ್ಕೆ ಡಿಕ್ಕಿಯಾಗಿದೆ ಅನಂತರ ಮುನ್ನುಗ್ಗಿದ ಟೆಂಪೋ ಪಕ್ಕದಲ್ಲೇ ನಿಲ್ಲಿಸಿದ್ದ ಮೋಟಾರ್ ಬೈಕ್‍ಗೆ (ಕೆಎ12ಕೆ5631)ಕ್ಕೆ ಡಿಕ್ಕಿಯಾಗಿದೆ ಇದರಿಂದ ಮಾರುತಿ ವ್ಯಾನ್ ಹಾಗೂ ಬೈಕ್ ಜಖಂಗೊಂಡಿದೆ.

ಸುಂಟಿಕೊಪ್ಪ ಪೊಲೀಸರು ಪ್ರಕರಣದ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಗದ್ದೆಹಳ್ಳದ ಗಾಂಧಿವೃತ್ತದಲ್ಲಿ ಆಗಾಗ ಅವಘಡಗಳು ಸಂಭವಿಸುತ್ತಲೇ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಉಬ್ಬುಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಲೇ ಬಂದಿದ್ದರೂ ಲೋಕೋಪಯೋಗಿ ಇಲಾಖೆ ಯಾವದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಇ. ಕರೀಂ ಆಕ್ರೋಶ ವ್ಯಕ್ತಪಡಿಸಿದರು.